ಮುಂಬೈ: ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ನಂತೆ ಟೆಸ್ಟ್ ಮಾದರಿ ಕ್ರಿಕೆಟ್ ಆಡದ ಹಾರ್ದಿಕ್ ಪಾಂಡ್ಯ ಬಿಸಿಸಿಐ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಹಿಂದಿನ ಟ್ವಿಸ್ಟ್ ಏನೆಂದು ಈಗ ಬಯಲಾಗಿದೆ.
ಕುಂಟು ನೆಪ ಹೇಳಿ ಟೆಸ್ಟ್ ಮಾದರಿಯ ರಣಜಿ ಟ್ರೋಫಿ ಪಂದ್ಯಗಳಿಂದ ತಪ್ಪಿಸಿಕೊಂಡಿರುವ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ಮುನಿಸಿಕೊಂಡ ಬಿಸಿಸಿಐ ಇಬ್ಬರನ್ನೂ ವಾರ್ಷಿಕ ಗುತ್ತಿಗೆಯಿಂದ ಹೊರ ಹಾಕಿ ಶಿಕ್ಷೆ ವಿಧಿಸಿದೆ. ರಾಷ್ಟ್ರೀಯ ತಂಡಕ್ಕೆ ಮರಳಬೇಕಾದರೆ ರಣಜಿ ಟ್ರೋಫಿ ಆಡಬೇಕು ಎಂಬ ಸೂಚನೆಯನ್ನು ಇಬ್ಬರೂ ಕಡೆಗಣಿಸಿದ್ದಾರೆ.
ಆದರೆ ಈ ಇಬ್ಬರು ಪ್ರತಿಭಾವಂತರಿಗೆ ಶಿಕ್ಷೆ ನೀಡಿದ ಬಿಸಿಸಿಐ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಯಾಕೆ ಸುಮ್ಮನಾಗಿದೆ. ಹಾರ್ದಿಕ್ ಗೆ ಬಿಸಿಸಿಐ ಎ ದರ್ಜೆಯ ಗುತ್ತಿಗೆ ನೀಡಿರುವುದನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಶ್ನಿಸಿದ್ದರು. ಹಾರ್ದಿಕ್ ಗೂ ಅದೇ ರೀತಿಯ ಪರಿಗಣನೆ ಮಾಡಬೇಕು ಎಂದಿದ್ದರು.
ಆದರೆ ಹಾರ್ದಿಕ್ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಸಿಸಿಐ ಜೊತೆ ಅವರು ನಡೆಸಿದ ಮಾತುಕತೆ ಕಾರಣ ಎನ್ನಲಾಗಿದೆ. ಅವಕಾಶ ಸಿಕ್ಕಾಗಲೆಲ್ಲಾ ರೆಡ್ ಬಾಲ್ ಮಾದರಿಯ ದೇಶೀಯ ಕ್ರಿಕೆಟ್ ನಲ್ಲೂ ಆಡುವೆ. ಆದರೆ ಸದ್ಯಕ್ಕೆ ವೈದ್ಯಕೀಯ ಸಲಹೆಯಂತೆ ಸುದೀರ್ಘ ಮಾದರಿಯ ಆಟವಾಡಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿನಾಯ್ತಿ ನೀಡುವಂತೆ ಹಾರ್ದಿಕ್ ಮನವಿ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಬಿಸಿಸಿಐ ಹಾರ್ದಿಕ್ ಗೆ ವಿನಾಯ್ತಿ ನೀಡಿದೆ.