ರಣಜಿ ಆಡದಿದ್ದರೆ ಐಪಿಎಲ್ ಬಾಗಿಲು ಬಂದ್: ಹಾರ್ದಿಕ್ ಪಾಂಡ್ಯಗೆ ಮಾತ್ರ ವಿನಾಯ್ತಿ!

Krishnaveni K

ಬುಧವಾರ, 14 ಫೆಬ್ರವರಿ 2024 (12:06 IST)
Photo Courtesy: Twitter
ಮುಂಬೈ: ದೇಶೀಯ ಕ್ರಿಕೆಟ್ ಕಡೆಗಣಿಸಿ, ಐಪಿಎಲ್ ಕಡೆಗೆ ಗಮನ ಕೇಂದ್ರೀಕರಿಸುತ್ತಿರುವ ಯುವ ಕ್ರಿಕೆಟಿಗರಿಗೆ ಬಿಸಿಸಿಐ ಖಡಕ್ ನಿಯಮದ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದೆ.

ಇತ್ತೀಚೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್ ಕಡೆಗಣಿಸಿ ಐಪಿಎಲ್ ನತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಬರಲು ಐಪಿಎಲ್, ದೇಶೀಯ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಆಡುವ ‘ಶಾಸ್ತ್ರ’ ಮಾಡುತ್ತಿದ್ದಾರೆ. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಇಶಾನ್ ಕಿಶನ್ ಲೇಟೆಸ್ಟ್ ಉದಾಹರಣೆ. ಇಶಾನ್ ಟೆಸ್ಟ್ ಸರಣಿ ಅಲಭ್ಯರಿರುವುದಾಗಿ ಹೇಳಿ ಐಪಿಎಲ್ ಗೆ ತಯಾರಿ ನಡೆಸಿರುವುದು ಬಿಸಿಸಿಐ ಗಮನಕ್ಕೆ ಬಂದಿತ್ತು. ಇದರ ಬೆನ್ನಲ್ಲೇ ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ.

ಆಟಗಾರರ ಈ ನಡುವಳಿಕೆಯಿಂದ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಕೂಡಾ ಅಸಮಾಧಾನಗೊಂಡಿದೆ. ಇತ್ತೀಚೆಗೆ ಕ್ರಿಕೆಟಿಗರು ಟೆಸ್ಟ್ ಮಾದರಿಯಲ್ಲಿ ಆಡಲು ಹಿಂದೇಟು ಹಾಕುತ್ತಿರುವುದರಿಂದ ಬಿಸಿಸಿಐ ಕಠಿಣ ನಿಯಮ ಜಾರಿಗೆ ತರಲಿದೆ. ಅದರಂತೆ ಇನ್ನು ಮುಂದೆ ಆಯಾ ತವರು ರಾಜ್ಯಗಳ ಪರ ಕ್ರಿಕೆಟಿಗರು ಕಡ್ಡಾಯವಾಗಿ ರಣಜಿ ಟ್ರೋಫಿ ಕ್ರಿಕೆಟ್ ಆಡಲೇಕು. ಇಲ್ಲದೇ ಹೋದಲ್ಲಿ ಅವರಿಗೆ ಐಪಿಎಲ್ ನಲ್ಲಿ ಆಡಲೂ ಅವಕಾಶ ನೀಡುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಅಂತಹ ಕ್ರಿಕೆಟಿಗರನ್ನು ಐಪಿಎಲ್ ಹರಾಜಿಗೂ ಪರಿಗಣಿಸುವುದಿಲ್ಲ ಎಂಬ ಕಠಿಣ ನಿಯಮ ಜಾರಿಗೆ ತರಲು ಬಿಸಿಸಿಐ ಮುಂದಾಗಿದೆ.

ಆದರೆ ಇದು ಹಾರ್ದಿಕ್ ಪಾಂಡ್ಯಗೆ ಅನ್ವಯಿಸುವುದಿಲ್ಲ. ಆರೋಗ್ಯ ಸಮಸ್ಯೆಯಿಂದ ಹಾರ್ದಿಕ್ ಗೆ ಸುದೀರ್ಘ ಮಾದರಿಯ ಕ್ರಿಕೆಟ್ ಆಡಲು ಸಾ‍ಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಈ ನಿಯಮದಿಂದ ವಿನಾಯ್ತಿ ನೀಡಲಾಗಿದೆ. ಉಳಿದ ಕ್ರಿಕೆಟಿಗರು ರಾಷ್ಟ್ರೀಯ ತಂಡ ಅಥವಾ ಐಪಿಎಲ್ ನಲ್ಲಿ ಆಡಲು ಕನಿಷ್ಠ ಮೂರು ರಣಜಿ ಪಂದ್ಯವಾಡಬೇಕು ಎಂಬ ನಿಯಮ ಜಾರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ