ಐಪಿಎಲ್‌ಗೆ ಪಾಕ್ ಆಟಗಾರರನ್ನು ಸೇರಿಸಲು ಐಸಿಸಿ ಅಧ್ಯಕ್ಷ ಅಬ್ಬಾಸ್ ಬಯಕೆ

ಬುಧವಾರ, 25 ಮೇ 2016 (12:31 IST)
ಐಸಿಸಿ ಅಧ್ಯಕ್ಷ ಜಹೀರ್ ಅಬ್ಬಾಸ್ ತಾವು ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಐಪಿಎಲ್ ಫೈನಲ್ ಪಂದ್ಯ ವೀಕ್ಷಣೆಗೆ ಆಗಮಿಸುವ ಸಂದರ್ಭದಲ್ಲಿ  ಐಪಿಎಲ್‌ನಲ್ಲಿ ಪಾಕಿಸ್ತಾನದ ಆಟಗಾರರನ್ನು ಆಡಿಸುವುದನ್ನು ಪರಿಗಣಿಸುವಂತೆ ಬಿಸಿಸಿಐ ಉನ್ನತ ಅಧಿಕಾರಿಗಳಿಗೆ ಕೇಳುವುದಾಗಿ ತಿಳಿಸಿದ್ದಾರೆ.
 
 ಪಾಕಿಸ್ತಾನ ಆಟಗಾರರನ್ನು ಐಪಿಎಲ್‌ನಲ್ಲಿ ಆಡಿಸಿದರೆ ಲೀಗ್‌ನ ಪ್ರಾಮುಖ್ಯತೆ ಮತ್ತು ಸ್ಥಾನಮಾನವು ಹೆಚ್ಚುತ್ತದೆ ಎಂದು ಅಬ್ಬಾಸ್ ಮಾಧ್ಯಮಕ್ಕೆ ತಿಳಿಸಿದರು.  ಪಾಕಿಸ್ತಾನ ಮತ್ತು ಭಾರತ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧವನ್ನು ಪುನಶ್ಚೇತನಗೊಳಿಸುವಂತೆಯೂ ಅವರು ಕರೆ ನೀಡಿದರು.

ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಅನೇಕ ಮಂದಿ ಪಾಕಿಸ್ತಾನ ಕ್ರಿಕೆಟರುಗಳು ಆಡಿದ್ದರು. ಆದರೆ 2008ರ ನವೆಂಬರ್‌ನಲ್ಲಿ ಮುಂಬೈ ಭಯೋತ್ಪಾದನೆ ದಾಳಿ ಬಳಿಕ ಬಿಸಿಸಿಐ ಪಾಕಿಸ್ತಾನಿ ಆಟಗಾರರಿಗೆ ಶ್ರೀಮಂತ ಲೀಗ್‌ಗೆ ಪ್ರವೇಶವನ್ನು ನಿರಾಕರಿಸಿತ್ತು. 

ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧದ ಇಚ್ಛೆ ಕುರಿತು ಹೇಳಿದ ಅಬ್ಬಾಸ್ ಪಾಕಿಸ್ತಾನ ಮತ್ತು ಭಾರತ ಆಡುವುದನ್ನು ಪ್ರತಿಯೊಬ್ಬರೂ ನೋಡಲು ಇಷ್ಟಪಡುತ್ತಾರೆ. ಆದ್ದರಿಂದ ದ್ವಿಪಕ್ಷೀಯ ಸರಣಿಗೆ ಯಾವುದೇ ಸರ್ಕಾರದ ಅಡೆತಡೆಗಳನ್ನು ನಿವಾರಿಸಬೇಕು ಎಂದು ತಿಳಿಸಿದರು.
 
 ಅಬ್ಬಾಸ್ ಜುಲೈ ಕೊನೆಯಲ್ಲಿ ಐಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಕ್ಕಿಳಿಯಲಿದ್ದು, ಅದಾದ ಬಳಿಕ ಪಿಸಿಬಿಯಲ್ಲಿ ಅವರಿಗೆ ಮುಖ್ಯ ಹುದ್ದೆಯನ್ನು ನಿರೀಕ್ಷಿಸಲಾಗಿದೆ. ಪಾಕಿಸ್ತಾನವು 2012-13ರಲ್ಲಿ ಮೂರು ಏಕದಿನಗಳು ಮತ್ತು 2 ಟಿ20 ಪಂದ್ಯಗಳ ಕಿರು ಸರಣಿಯನ್ನು ಭಾರತದಲ್ಲಿ ಆಡಿದ್ದನ್ನು ಬಿಟ್ಟರೆ 2007ರಿಂದ ಉಭಯ ರಾಷ್ಟ್ರಗಳು ಯಾವುದೇ ದ್ವಿಪಕ್ಷೀಯ ಸರಣಿ ಆಡಿಲ್ಲ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ