ರೋಹಿತ್ ಶರ್ಮಾ ಇಫೆಕ್ಟ್: ಕೇಪ್ ಟೌನ್ ಪಿಚ್ ಗೆ ಐಸಿಸಿ ನೀಡಿದ ರೇಟಿಂಗ್ ಇದು!

Krishnaveni K

ಬುಧವಾರ, 10 ಜನವರಿ 2024 (09:45 IST)
ದುಬೈ: ಇತ್ತೀಚೆಗೆ ನಡೆದಿದ್ದ ಭಾರತ-ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಎರಡನೇ ಟೆಸ್ಟ್ ಪಂದ್ಯ ಕೇವಲ ಒಂದೂವರೆ ದಿನಕ್ಕೆ ಮುಗಿದೇ ಹೋಗಿತ್ತು.

ಈ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತೀಯ ಪಿಚ್ ಗಳು ಮತ್ತು ವಿದೇಶದ ವೇಗದ ಪಿಚ್ ಗಳಿಗೆ ನೀಡಲಾಗುವ ಅಂಕದ ಬಗ್ಗೆ ಆಕ್ಷೇಪವೆತ್ತಿದ್ದರು.

ಇದರ ಬೆನ್ನಲ್ಲೇ ಐಸಿಸಿ ಈಗ ಕೇಪ್ ಟೌನ್ ಪಿಚ್ ಗೆ ರೇಟಿಂಗ್ ನೀಡಿದೆ. ಒಂದೂವರೆ ದಿನದಲ್ಲೇ ಪಂದ್ಯ ಮುಗಿದಿದ್ದ ಕೇಪ್ ಟೌನ್ ಪಿಚ್ ಗೆ ಐಸಿಸಿ ‘ತೃಪ್ತಿದಾಯಕವಲ್ಲ’ ಎಂದು ರೇಟಿಂಗ್ ನೀಡಿದೆ.

ಮೊದಲ ದಿನ ಬ್ಯಾಟಿಂಗ್ ಗೆ ಸಹಕರಿಸಬಹುದು ಮತ್ತು ಕೊನೆಯ ಎರಡು ದಿನ ಈ ಪಿಚ್ ಸ್ಪಿನ್ನರ್ ಗಳಿಗೆ ಸಹಕರಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ದಿನದಿಂದಲೇ ಬಾಲ್ ಭಾರೀ ಸ್ವಿಂಗ್ ಆಗುತ್ತಿತ್ತು. ಪರಿಣಾಮ ಬೌಲರ್ ಗಳು ಅದರಲ್ಲೂ ವೇಗಿಗಳೇ ಮೇಲುಗೈ ಸಾಧಿಸಿದ್ದರು. ಬ್ಯಾಟಿಂಗ್ ಈ ಪಿಚ್ ನಲ್ಲಿ ತ್ರಾಸದಾಯಕವಾಗಿತ್ತು. ಇದಕ್ಕೆ ಭಾರತ ಒಂದೇ ಒಂದು ರನ್ ಗಳಿಸದೇ ಕೊನೆಯ 6 ವಿಕೆಟ್ ಕಳೆದುಕೊಂಡಿದ್ದೇ ಸಾಕ್ಷಿ. ಹೀಗಾಗಿ ಪಿಚ್ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ