ಮುಂಬೈ: ಪವಿತ್ರ ರಂಜಾನ್ ತಿಂಗಳಲ್ಲಿ ಮೊಹಮ್ಮದ್ ಶಮಿ ಅವರು ರೋಜಾ (ಉಪವಾಸ) ಆಚರಿಸದಿರುವುದು ಭಾರೀ ಚರ್ಚೆಗೆ ಕಾರಣವಾಯಿತು. ಈ ಬಗ್ಗೆ ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಶಮಿಗೆ ಬೆಂಬಲ ಸೂಚಿಸಿ, ಪ್ರತಿಗಾಮಿ ಮತಾಂಧ ಮೂರ್ಖರ ಬಗ್ಗೆ ಗಮನ ಹರಿಸಬೇಡಿ ಎಂದು ಕೌಂಟರ್ ನೀಡಿದ್ದಾರೆ.
ಮಂಗಳವಾರ ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ರೋಜಾ ಆಚರಣೆ ಮಾಡದೆ ಶಮಿ ಎನರ್ಜಿ ಡ್ರಿಂಕ್ ಸೇವಿಸಿರುವುದಕ್ಕೆ ಪರ ಹಾಗೂ ವಿರೋಧಕ್ಕೆ ಕಾರಣವಾಯಿತು.
ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು, ಇಸ್ಲಾಮಿಕ್ ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಮಾಡದಿರುವ ಶಮಿ ಅವರು ದೇವರ ದೃಷ್ಟಿಯಲ್ಲಿ ಅಪರಾಧಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಈ ಹೇಳಿಕೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಜಾವೇದ್ ಅವರು ಶಮಿ ಅವರೇ ಎಲ್ಲ ನಕಾರಾತ್ಮಕತೆಯನ್ನು ನಿರ್ಲಕ್ಷಿಸಿ, ನಾಳಿನ ಫೈನಲ್ ಪಂದ್ಯಾಟದ ಬಗ್ಗೆ ಯೋಚಿಸಿ ಎಂದಿದ್ದಾರೆ.
ಶಮಿ ಸಾಹೇಬ್ ಅವರೇ, ದುಬೈನ ಸುಡು ಬಿಸಿಲಿನ ಮೈದಾನದಲ್ಲಿ ನೀರು ಕುಡಿದಿರುವ ನಿಮ್ಮ ಬಗ್ಗೆ ಹೇಳಿಕೆ ನೀಡಿದ ಮತಾಂಧ ಮೂರ್ಖರಿಗೆ ಹೆದರಬೇಡಿ. ನೀವು ನಮ್ಮೆಲ್ಲರಿಗೆ ಹೆಮ್ಮೆ ತಂದಿರುವ ಶ್ರೇಷ್ಠ ಭಾರತೀಯ ಆಟಗಾರ. ನಿಮಗೆ ಮತ್ತು ಇಡೀ ತಂಡಕ್ಕೆ ನನ್ನ ಶುಭಾಶಯಗಳು" ಎಂದು ಅವರು ಹೇಳಿದರು.
ಮಂಗಳವಾರದ ಪಂದ್ಯವನ್ನು ಭಾರತ ಗೆದ್ದು, ಭಾನುವಾರದ ಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು.