ರಾಜಧಾನಿಯಲ್ಲಿ ಬಿಡುವು ನೀಡದ ಮಳೆ: ಭಾರತ- ನ್ಯೂಜಿಲೆಂಡ್ ಟೆಸ್ಟ್‌ನ ಮೊದಲ ದಿನದಾಟ ರದ್ದು

Sampriya

ಬುಧವಾರ, 16 ಅಕ್ಟೋಬರ್ 2024 (16:30 IST)
Photo Courtesy X
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬಿಡದೆ ಮಳೆಯಾಗುತ್ತಿರುವುದರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಆರಂಭದ ದಿನದ ಆಟ ರದ್ದುಗೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ  ಪಂದ್ಯ ಆರಂಭವಾಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪಂದ್ಯದ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ.

ನಿಗದಿಯಂತೆ ಮುಂಜಾನೆ 9 ಗಂಟೆಗೆ ಉಭಯ ತಂಡಗಳ ನಡುವೆ ಟಾಸ್ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಟಾಸ್ ಸಹ ನಡೆಯಲು ಸಾಧ್ಯವಾಗಲಿಲ್ಲ. ಮಂಗಳವಾರಕ್ಕೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ, ತುಂತುರು ಮಳೆ ಬೀಳುತ್ತಲೇ ಇದೆ.

ಮಳೆ ಕೊಂಚ ಕಡಿಮೆಯಾದಾಗಲೆಲ್ಲ ಅಂಪೈರ್​ಗಳು ಮೈದಾನವನ್ನು ಪರಿಶೀಲಿಸಿದರು. ಆದರೆ ಪಂದ್ಯಕ್ಕೆ ಮೈದಾನ ಸಜ್ಜಾಗಿಲ್ಲದ್ದನ್ನು ಮನಗಂಡ ಅಂಪೈರ್ಸ್​ ಕಾದು ನೋಡುವ ತಂತ್ರಕ್ಕೆ ಮುಂದಾದರು. ಹೀಗಾಗಿ ಮೊದಲ ದಿನದಾಟದ ಮೊದಲೆರಡು ಸೆಷನ್​ಗಳವರೆಗೂ ಪಂದ್ಯವನ್ನು ನಡೆಸಲು ಕಾಯಲಾಯಿತು. ಆದರೆ ಆ ಬಳಿಕವೂ ಮಳೆ ನಿಲ್ಲದನ್ನು ಗಮನಿಸಿದ ಅಂಪೈರ್ಸ್​, ದಿನದಾಟವನ್ನು ರದ್ದುಗೊಳಿಸಲು ಮುಂದಾದರು.

ಹವಾಮಾನ ವರದಿಯ ಪ್ರಕಾರ, ಅಕ್ಟೋಬರ್ 20ರವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ.  ಪಂದ್ಯದ ಎರಡನೇ ದಿನದಂದು ಶೇ. 41 ರಷ್ಟು ಮಳೆಯಾಗುವ ಸಾಧ್ಯತೆ ಇದ್ದರೆ, ಮೂರನೇ ದಿನದಂದು ಮಳೆ ಇನ್ನಷ್ಟು ಹೆಚ್ಚಲಿದೆ. ಅದರಂತೆ ಶೇ. 67 ರಷ್ಟು ಮಳೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ