ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವೆನ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಹೀನಾಯ ಆರಂಭ ಪಡೆದಿದೆ. ಕೇವಲ 1 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಉದುರಿಸಿಕೊಂಡಿದೆ.
ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 358 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 669 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದರಿಂದಾಗಿ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 311 ರನ್ ಗಳ ಬೃಹತ್ ಮುನ್ನಡೆ ಪಡೆಯಿತು.
ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕೆಟ್ಟ ಆರಂಭ ಪಡೆದಿದೆ. ತಂಡದ ಖಾತೆ ಮತ್ತು ತಮ್ಮ ಖಾತೆ ತೆರೆಯುವ ಮೊದಲೇ ಯಶಸ್ವಿ ಜೈಸ್ವಾಲ್ ನಾಲ್ಕನೇ ಎಸೆತಕ್ಕೇ ಕ್ರಿಸ್ ವೋಕ್ಸ್ ಗೆ ವಿಕೆಟ್ ಒಪ್ಪಿಸಿದರು. ವಿಪರ್ಯಾಸವೆಂದರೆ ನಂತರ ಬಂದ ಸಾಯಿ ಸುದರ್ಶನ್ ಕೂಡಾ ಬಂದ ಎಸೆತಕ್ಕೇ ಶೂನ್ಯಕ್ಕೆ ನಿರ್ಗಮಿಸಿದರು. ಇದರಿಂದಾಗಿ ಭಾರತ ತಂಡ ಖಾತೆ ತೆರೆಯುವ ಮೊದಲೇ 2 ವಿಕೆಟ್ ಉದುರಿಸಿಕೊಂಡು ಸಂಕಷ್ಟಕ್ಕೀಡಾಯಿತು.
ಇದೀಗ ಭಾರತ ಭೋಜನ ವಿರಾಮದ ವೇಳೆಗೆ ಕೇವಲ 1 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. 1 ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು ಇನ್ನೂ ಖಾತೆ ತೆರೆಯದ ನಾಯಕ ಶುಭಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇನ್ನೂ 310 ರನ್ ಗಳ ಹಿನ್ನಡೆಯಲ್ಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಭಾರತ ಸೋಲಿನ ಅಂಚಿನಲ್ಲಿದೆ.
ಇದಕ್ಕೂ ಮೊದಲು ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಜೋ ರೂಟ್ 150, ನಾಯಕ ಬೆನ್ ಸ್ಟೋಕ್ಸ್ 141 ರನ್ ಗಳಿಸಿದ್ದರು. ಭಾರತದ ಪರ ರವೀಂದ್ರ ಜಡೇಜಾ 4, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ ತಲಾ 2, ಮೊಹಮ್ಮದ್ ಸಿರಾಜ್, ಅಂಶುಲ್ ಕಾಂಬೋಜ್ ತಲಾ 1 ವಿಕೆಟ್ ಕಬಳಿಸಿದರು.