ಮುಂಬೈ: ಟೀಂ ಇಂಡಿಯಾ ಟೆಸ್ಟ್ ಮಾದರಿಯಲ್ಲಿ ದಯನೀಯ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಅಭಿಮಾನಿಗಳು ಕೋಚ್ ಗೌತಮ್ ಗಂಭೀರ್ ವಿರುದ್ಧ ಸಿಟ್ಟಾಗಿದ್ದಾರೆ. ಶಮಿಯನ್ನು ಡ್ರಾಪ್ ಮಾಡಿಸಿದ್ರು, ರೋಹಿತ್, ಕೊಹ್ಲಿ, ಅಶ್ವಿನ್ ಗೆ ನಿವೃತ್ತಿ ಕೊಡಿಸಿದ್ರು ಎಂದು ಆರೋಪಗಳ ಪಟ್ಟಿಯನ್ನೇ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನೂ ಸೋತು ಟೀಂ ಇಂಡಿಯಾ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಇದಕ್ಕೆಲ್ಲಾ ಕೋಚ್ ಗೌತಮ್ ಗಂಭೀರ್ ತಲೆಬುಡವಿಲ್ಲದ ಯೋಜನೆಗಳೇ ಕಾರಣ ಎಂದು ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.
ಮೊಹಮ್ಮದ್ ಶಮಿ ಕಳೆದ ಏಕದಿನ ವಿಶ್ವಕಪ್ ನ ಹೀರೋ. ಟೆಸ್ಟ್ ಕ್ರಿಕೆಟ್ ನಲ್ಲೂ ಜಸ್ಪ್ರೀತ್ ಬುಮ್ರಾಗೆ ಒಳ್ಳೆಯ ಸಾಥ್ ನೀಡುತ್ತಿದ್ದರು. ಆದರೆ ಗೌತಮ್ ಗಂಭೀರ್ ಕೋಚ್ ಆದಾಗಿನಿಂದ ಅವರನ್ನು ಗಾಯದ ನೆಪವೊಡ್ಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಲೇ ಇಲ್ಲ. ಇದಕ್ಕೆ ಗಂಭೀರ್ ರಾಜಕೀಯವೇ ಕಾರಣ ಎಂದು ಅಭಿಮಾನಿಗಳು ದೂರಿದ್ದಾರೆ.
ಇನ್ನು, ಟೆಸ್ಟ್ ಕ್ರಿಕೆಟ್ ನಲ್ಲಿ ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ದಿಡೀರ್ ವಿದಾಯ ಘೋಷಿಸಿದರು. ಇದಕ್ಕೂ ಗಂಭೀರ್ ಯುವ ಆಟಗಾರರ ಮೇಲಿನ ಪ್ರೀತಿಯೇ ಕಾರಣ ಎನ್ನಲಾಗುತ್ತಿದೆ. ಗಂಭೀರ್ ಒತ್ತಡದಿಂದಾಗಿಯೇ ಈ ಮೂವರು ದಿಡೀರ್ ನಿವೃತ್ತಿ ಘೋಷಿಸಿದರು ಎಂಬುದು ಫ್ಯಾನ್ಸ್ ಆರೋಪ.
ಇದಲ್ಲದೆ, ಟೀಂ ಇಂಡಿಯಾದಲ್ಲಿ ಈಗ ಇರುವ ಕೋಚಿಂಗ್ ಸಿಬ್ಬಂದಿಗಳನ್ನೆಲ್ಲಾ ತಮ್ಮ ಆಪ್ತವಲಯದವರನ್ನೇ ನೇಮಿಸಿಕೊಂಡಿದ್ದಾರೆ. ಹೀಗಿದ್ದರೂ ಗಂಭೀರ್ ಗೆ ಫಲಿತಾಂಶ ಕೊಡಲು ಸಾಧ್ಯವಾಗುತ್ತಿಲ್ಲ. ಇಂತಹ ಕೋಚ್ ನಮಗೆ ಬೇಡ, ಬಿಸಿಸಿಐ ಮೊದಲು ಗಂಭೀರ್ ರನ್ನು ಕಿತ್ತು ಹಾಕಿ ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ.