IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

Krishnaveni K

ಶನಿವಾರ, 5 ಜುಲೈ 2025 (16:47 IST)
Photo Credit: X
ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲೂ ಕರುಣ್ ನಾಯರ್ ಕಳಪೆ ಮೊತ್ತಕ್ಕೆ ಔಟಾಗಿದ್ದು ನೆಟ್ಟಿಗರಿಂದ ತೀವ್ರ ಟ್ರೋಲ್ ಗೊಳಗಾಗಿದ್ದಾರೆ. ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಅಜೇಯರಾಗಿದ್ದ ಕರುಣ್ ನಾಯರ್ ಇಂದ ಬೆಳಗಿನ ಅವಧಿಯಲ್ಲೇ ವಿಕೆಟ್ ಒಪ್ಪಿಸಿದ್ದಾರೆ. ಅವರು ಗಳಿಸಿದ್ದು ಕೇವಲ 26 ರನ್. ಕೆಎಲ್ ರಾಹುಲ್ ಜೊತೆಗೂಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಎಲ್ಲಾ ಅವಕಾಶವಿದ್ದರೂ ಅವರು ಕೈ ಚೆಲ್ಲಿದ್ದಾರೆ. ಭಾರತ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ತ್ರಿಶತಕ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ಕರುಣ್ ನಾಯರ್ ರದ್ದು. ಆದರೆ ಕಳೆದ 8 ವರ್ಷಗಳಿಂದ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಒಮ್ಮೆ ಅವರು ಸೋಷಿಯಲ್ ಮೀಡಿಯಾದಲ್ಲಿ ‘ಡಿಯರ್ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು’ ಎಂದು ಕೇಳಿಕೊಂಡಿದ್ದರು.

ಇದೀಗ ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದರಿಂದ 8 ವರ್ಷಗಳ ಬಳಿಕ ಕೊನೆಗೂ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಅವರು ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಇದಕ್ಕೆ ಅವರು ತೀವ್ರ ಟೀಕೆಗೊಳಗಾಗಿದ್ದಾರೆ. ಈಗ ಸ್ವತಃ ಕ್ರಿಕೆಟ್ ನಿಮ್ಮನ್ನು ನೋಡಿ ನಗುತ್ತಿರಬಹುದು ಎಂದು ಹಲವರು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ