ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು 399 ರನ್ ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ಮೂರನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿ ದಿನದಾಟ ಮುಗಿಸಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ ಶುಬ್ಮನ್ ಗಿಲ್ ಶತಕದ ನೆರವಿನಿಂದ ಟೀಂ ಇಂಡಿಯಾ 255 ರನ್ ಗಳಿಸಿ ಆಲೌಟ್ ಆಯಿತು. ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ ಉತ್ತಮ ಆಟವಾಡಿದ್ದರಿಂದ ತಂಡದ ಮೊತ್ತ 400 ರ ಗಡಿ ಸಮೀಪ ಬರಲು ಸಾಧ‍್ಯವಾಯಿತು. ಶುಬ್ಮನ್ ಗಿಲ್ 104 ರನ್ ಗಳಿಸಿ ಔಟಾದರು.
ಇದೀಗ ದ್ವಿತೀಯ ಇನಿಂಗ್ಸ್ ನಲ್ಲಿ ಎಂದಿನಂತೇ ಬಿರುಸಿನ ಆರಂಭ ನೀಡಿದ ಇಂಗ್ಲೆಂಡ್ ಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ವಿಕೆಟ್ ಕೀಳುವ ಮೂಲಕ ಆಘಾತ ನೀಡಿದ್ದಾರೆ. ಇಂಗ್ಲೆಂಡ್ ಪರ 28 ರನ್ ಗಳಿಸಿದ್ದ ಬೆನ್ ಡಕೆಟ್ ಔಟಾಗಿದ್ದಾರೆ. ಅಶ್ವಿನ್ ಮೊದಲ ಇನಿಂಗ್ಸ್ ನಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದರು. ಆದರೆ ಈ ಇನಿಂಗ್ಸ್ ನಲ್ಲಿ ಆರಂಭದಲ್ಲೇ ವಿಕೆಟ್ ಪಡೆದು ಶುಭಾರಂಭ ಮಾಡಿದ್ದಾರೆ.
ಇನ್ನೊಂದೆಡೆ ಜಾಕ್ ಕ್ರಾವ್ಲೇ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದು 29 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಅವರಿಗೆ ಸಾಥ್ ನೀಡಲು ನೈಟ್ ವಾಚ್ ಮನ್ ಆಗಿ ಬಂದ ರೆಹಾನ್ ಅಹ್ಮದ್ 9 ರನ್ ಗಳಿಸಿದ್ದಾರೆ. ಇದೀಗ ಇಂಗ್ಲೆಂಡ್ ಭಾರತದ ಮೊದಲ ಇನಿಂಗ್ಸ್ ಮೊತ್ತದಿಂದ 332 ರನ್ ಹಿನ್ನಡೆಯಲ್ಲಿದೆ.
ಪಂದ್ಯದಲ್ಲಿ ಇನ್ನು ಎರಡು ದಿನ ಬಾಕಿ ಉಳಿದಿದ್ದು ನಾಳೆಯೇ ಫಲಿತಾಂಶ ಬರುವುದು ನಿಶ್ಚಿತವಾಗಿದೆ. ಭಾರತಕ್ಕೆ ನಾಳೆ ಅನುಭವಿಗಳಾದ ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ಅತ್ಯುತ್ತಮ ದಾಳಿ ಸಂಘಟಿಸಿ ಬ್ರೇಕ್ ನೀಡಬೇಕಿದೆ. ಇಲ್ಲದೇ ಹೋದರೆ ಗೆಲುವು ಕಷ್ಟವಾಗಬಹುದು.