ಶುಬ್ಮನ್ ಗಿಲ್ ಗೆ ಈಗ ಚೇತೇಶ್ವರ ಪೂಜಾರ ಭಯ!

Krishnaveni K

ಭಾನುವಾರ, 4 ಫೆಬ್ರವರಿ 2024 (10:40 IST)
ವಿಶಾಖಪಟ್ಟಣ: ಟೆಸ್ಟ್ ಮಾದರಿಯಲ್ಲಿ ಈಗ ಶುಬ್ಮನ್ ಗಿಲ್ ರನ್ ಬರಗಾಲ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಈಗ ತಮ್ಮ ಸ್ಥಾನವನ್ನು ಚೇತೇಶ್ವರ ಪೂಜಾರ ಮತ್ತೆ ಆಕ್ರಮಿಸಿಕೊಳ್ಳಬಹುದೋ ಎಂಬ ಭಯವಿದೆ.

ಮೂರನೇ ಕ್ರಮಾಂಕದಲ್ಲಿ ದ್ರಾವಿಡ್‍ ಬಳಿಕ ಫಿಕ್ಸ್ ಆಗಿದ್ದ ಪೂಜಾರ
ರಾಹುಲ್ ದ್ರಾವಿಡ್ ನಿವೃತ್ತಿ ಬಳಿಕ ಚೇತೇಶ್ವರ ಪೂಜಾರ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನ ಭದ್ರಪಡಿಸಿದ್ದರು. ಇದುವರೆಗೆ 100 ಕ್ಕೂ ಹೆಚ್ಚು ಪಂದ್ಯವಾಡಿದ ಆಟಗಾರರ ಸಾಲಿನಲ್ಲಿ ಪೂಜಾರ ಕೂಡಾ ಇದ್ದಾರೆ. ಆದರೆ ಕೆಲವು ಸಮಯ ಮೊದಲು ಪೂಜಾರ ಫಾರ್ಮ್ ಸಮಸ್ಯೆ ಎದುರಿಸಿ ತಂಡದಿಂದ ಸ್ಥಾನ ಕಳೆದುಕೊಂಡಿದ್ದರು. ಈ ವೇಳೆ ಗಿಲ್ ತಂಡದ ಖಾಯಂ ಸದಸ್ಯರಾದರು.

ಇದೀಗ ಶುಬ್ಮನ್ ಗಿಲ್ ರನ್ ಬರಗಾಲ ಎದುರಿಸುತ್ತಿದ್ದು, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಪರದಾಡಬೇಕಾಗಿದೆ. ವಿರಾಟ್ ಕೊಹ್ಲಿ ತಂಡಕ್ಕೆ ವಾಪಸ್ ಆದರೆ ಗಿಲ್ ಸ್ಥಾನಕ್ಕೆ ಕುತ್ತು ಬರಬಹುದು. ಆರಂಭಿಕರಾಗಿದ್ದ ಗಿಲ್ ತಾವೇ ಬಯಸಿ ಮೂರನೇ ಕ್ರಮಾಂಕಕ್ಕಿಳಿದಿದ್ದರು. ಆದರೆ ಆ ಸ್ಥಾನವನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾರೆ.

ಆದರೆ ಇನ್ನೊಂದೆಡೆ ಪೂಜಾರ ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದು, ಗಿಲ್ ಇದೇ ರೀತಿ ವೈಫಲ್ಯಕ್ಕೊಳಗಾಗುತ್ತಿದ್ದರೆ ಪೂಜಾರ ಆ ಸ್ಥಾನವನ್ನು ಮರಳಿ ಪಡೆದರೂ ಅಚ್ಚರಿಯಿಲ್ಲ. ಇತ್ತೀಚೆಗೆ ಮಾಜಿ ಕೋಚ್ ರವಿಶಾಸ್ತ್ರಿ ಕೂಡಾ ಇದೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಗಿಲ್ ಗೆ ಒಂದು ದೊಡ್ಡ ಇನಿಂಗ್ಸ್ ನ ಅಗತ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ