IND vs SA T20: ವರುಣ್ ಚಕ್ರವರ್ತಿಗೆ ಚಚ್ಚುತ್ತಿದ್ದ ಮಾರ್ಕೋ ಜೇನ್ಸನ್ ಗೆ ಬಲೆ ಬೀಸಿದ ಅರ್ಷ್ ದೀಪ್, ಟೀಂ ಇಂಡಿಯಾ ವಿನ್

Krishnaveni K

ಗುರುವಾರ, 14 ನವೆಂಬರ್ 2024 (08:51 IST)
Photo Credit: BCCI
ಸೆಂಚೂರಿಯನ್: ಭಾರತ ಮತ್ತು ದ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 11 ರನ್ ಗಳಿಂದ ಗೆಲ್ಲುವುದರ ಮೂಲಕ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ತಿಲಕ್ ವರ್ಮ ಅಬ್ಬರದ ಶತಕದ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತ್ತು. ಆರಂಭದಲ್ಲಿಯೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡರೂ ಬಳಿಕ ಅಭಿಷೇಕ್ ಶರ್ಮ-ತಿಲಕ್ ವರ್ಮ ಜೋಡಿ ಎದುರಾಳಿಗಳನ್ನು ಚೆಂಡಾಡಿತು. ಒಟ್ಟು 25 ಎಸೆತಗಳಲ್ಲಿ 50 ರನ್ ಸಿಡಿಸಿದ ಅಭಿಷೇಕ್ ಶರ್ಮ ಔಟಾದರೆ ಕೊನೆಯವರೆಗೂ ಅಜೇಯರಾಗುಳಿದ ತಿಲಕ್ ವರ್ಮ ಕೇವಲ 56 ಎಸೆತಗಳಿಂದ 107 ರನ್ ಚಚ್ಚಿ ತಂಡಕ್ಕೆ ದೊಡ್ಡ ಮೊತ್ತ ಕೊಡಿಸಿದರು.

ಈ ಮೊತ್ತ ಬೆನ್ನತ್ತಿದ ಆಫ್ರಿಕಾ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಕೊನೆಯ ಹಂತದಲ್ಲಿ ಸಿಡಿದ ಮಾರ್ಕೋ ಜೇನ್ಸನ್ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಮನಸೋ ಇಚ್ಛೆ ದಂಡಿಸಿ 17 ಎಸೆತಗಳಿಂದ 54 ರನ್ ಗಳಿಸಿ ಇನ್ನೇನು ಟೀಂ ಇಂಡಿಯಾದಿಂದ ಜಯ ಕಸಿದೇ ಬಿಟ್ಟರು ಎನ್ನುವ ಪರಿಸ್ಥಿತಿಯಿತ್ತು. ಈ ವೇಳೆ ನೆರವಿಗೆ ಬಂದ ಅರ್ಷ್ ದೀಪ್ ಸಿಂಗ್ ಎಲ್ ಬಿಡಬ್ಲ್ಯು ಮಾಡುವ ಮೂಲಕ ಜೇನ್ಸನ್ ವಿಕೆಟ್ ಪಡೆದು ಭಾರತ ನಿಟ್ಟುಸಿರು ಮಾಡುವಂತೆ ಮಾಡಿದರು.

ಅಂತಿಮವಾಗಿ ಆಫ್ರಿಕಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಅರ್ಷ್ ದೀಪ್ ಸಿಂಗ್ 3, ವರುಣ್ ಚಕ್ರವರ್ತಿ 2 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ