ಆಡಿಸಿದರೂ, ಕಾಡಿಸಿದರೂ ಬೀಳದ ಹನುಮ-ರವಿಚಂದ್ರನ್ ಅಶ್ವಿನ್: ಟೆಸ್ಟ್ ಪಂದ್ಯ ಡ್ರಾ

ಸೋಮವಾರ, 11 ಜನವರಿ 2021 (12:49 IST)
ಸಿಡ್ನಿ: ಒಂದೆಡೆ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ. ಇನ್ನೊಂದೆಡೆ ಆಸ್ಟ್ರೇಲಿಯನ್ ಕ್ರಿಕೆಟಿಗರಿಂದ ಆನ್ ಫೀಲ್ಡ್ ನಲ್ಲಿ ಸ್ಲೆಡ್ಜಿಂಗ್. ಮತ್ತೊಂದೆಡೆ ಗಾಯಗಳ ಸರಮಾಲೆ. ಇವೆಲ್ಲಾ ಹತಾಶೆಯನ್ನು ಆಟದ ಮೂಲಕ ತೋರಿಸಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಸೋಲಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

407 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಅಂತಿಮ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಿನ್ನೆ 98 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ದಿನದಾಟ ಕೊನೆಗೊಂಡಿದ್ದಾಗ ಭಾರತ ಇಂದು ಸುಲಭವಾಗಿ ಸೋಲಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಅದರಲ್ಲೂ ಡ್ರಾ ಮಾಡಿಕೊಳ್ಳಬಹುದೆಂದು ಯಾರೂ ಕನಸಲ್ಲೂ ಊಹಿಸಿರಲಿಲ್ಲ.

ಆದರೆ ಇದೆಲ್ಲವೂ ಸಾಧ್ಯವಾಗಿದ್ದು ರಿಷಬ್ ಪಂತ್-ಚೇತೇಶ್ವರ ಪೂಜಾರ ಮತ್ತು ರವಿಚಂದ್ರನ್ ಅಶ್ವಿನ್-ಹನುಮ ವಿಹಾರಿ ನಡುವಿನ ಜೊತೆಯಾಟದಿಂದ. ಅದರಲ್ಲೂ ರಿಷಬ್ ಆಡುವಾಗ ಭಾರತ ಜಯ ಗಳಿಸಬಹುದೆಂಬ ಆಸೆ ಚಿಗುರಿತ್ತು. ಆದರೆ ಅವರ ವಿಕೆಟ್ ಬಿದ್ದಾಗ ಭಾರತ ಮತ್ತೆ ಸೋಲಿನ ಭೀತಿಗೆ ಸಿಲುಕಿತ್ತು.

ಈ ವೇಳೆ ಜೊತೆಯಾದ ರವಿಚಂದ್ರನ್  ಅಶ್ವಿನ್-ಹನುಮ ವಿಹಾರಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅಲ್ಲಿಯವರೆಗೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಪಂದ್ಯ ಡ್ರಾದತ್ತ ಸಾಗಿತು. ಅದರಲ್ಲೂ ಹನುಮ ವಿಹಾರಿ ಬರೋಬ್ಬರಿ 161 ಎಸೆತ ಎದುರಿಸಿದರೆ ಗಳಿಸಿದ್ದು ಬರೀ 23 ರನ್! ಗಾಯದಿಂದಾಗಿ ಅವರಿಗೆ ಓಡಿ ರನ್ ಗಳಿಸುವುದು ಕಷ್ಟವಾಗಿತ್ತು. ಹಾಗಿದ್ದರೂ ಡಿಫೆಂಡಿಂಗ್ ಶಾಟ್ ಮೂಲಕ ಎದುರಾಳಿಗಳನ್ನು ಕಾಡಿದರು. ಇವರಿಗೆ ತಕ್ಕ ಸಾಥ್ ನಿಭಾಯಿಸಿದ್ದು ಅಶ್ವಿನ್. ಎರಡು ಬಾರಿ ಜೀವದಾನ ಪಡೆದ ಅಶ್ವಿನ್ 128 ಎಸೆತ ಎದುರಿಸಿ 39 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯವರೆಗೂ ವಿಕೆಟ್ ಬಿಟ್ಟುಕೊಡದೇ ಕೇವಲ ಒಂಟಿ ರನ್ ಗಳಿಸಿ ದಿನದಾಟ ಮುಗಿಸಿದ ಇಬ್ಬರಿಗೂ ಕೊನೆಗೊಂದು ಕಿರುನಗೆಯೊಂದಿಗೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ