ಭಾರತದ ಕೋಚ್ ಹುದ್ದೆಗೆ ದೇಶ, ವಿದೇಶಗಳಿಂದ ಒಟ್ಟು 57 ಅರ್ಜಿಗಳು

ಸೋಮವಾರ, 13 ಜೂನ್ 2016 (13:32 IST)
ಭಾರತದ ಹೆಡ್ ಕೋಚ್ ಖಾಲಿ ಹುದ್ದೆಗೆ ಜಗತ್ತಿನಲ್ಲೆಡೆಯಿಂದ ಭಾರೀ ಆಸಕ್ತಿ ಕಂಡುಬಂದಿದ್ದು, ಜೂನ್ 10ರೊಳಗೆ ಬಿಸಿಸಿಐ 57 ಅರ್ಜಿಗಳನ್ನು ಸ್ವೀಕರಿಸಿದೆ. ಜೂನ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು.
 
 2015ರ ವಿಶ್ವಕಪ್ ನಂತರ ಡಂಕನ್ ಫ್ಲೆಚ್ಚರ್ ನಿರ್ಗಮನದ ಬಳಿಕ ಹೆಡ್ ಕೋಚ್ ಹುದ್ದೆ ಖಾಲಿಯಾಗಿ ಬಿದ್ದಿತ್ತು. ಈ ಮಧ್ಯೆ, ರವಿ ಶಾಸ್ತ್ರಿ ಟೀಂ ಡೈರೆಕ್ಟರ್ ಆಗಿ ತಂಡಕ್ಕೆ ವಿಶ್ವ ಟಿ 20 ಮತ್ತು ಏಷ್ಯಾ ಕಪ್ ಮುಂತಾದ ಪ್ರಮುಖ ಪಂದ್ಯಾವಳಿಯಲ್ಲಿ ಮಾರ್ಗದರ್ಶನ ನೀಡಿದ್ದರು.
 
 ಬಿಸಿಸಿಐ ಭಾರತ ಮತ್ತು ವಿದೇಶಗಳಿಂದ ಒಟ್ಟು 57 ಅರ್ಜಿಗಳನ್ನು ಸ್ವೀಕರಿಸಿರುವುದಾಗಿ ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಬಿಸಿಸಿಐ ಗೌರವ ಕಾರ್ಯದರ್ಶಿ ಕಚೇರಿ ಅರ್ಜಿಗಳ ಪರಿಶೀಲನೆ ನಡೆಸುತ್ತಿದ್ದು, ಮಾನದಂಡವನ್ನು ಪೂರೈಸಿದ ಅಭ್ಯರ್ಥಿಗಳ ಪಟ್ಟಿಯನ್ನು ಮತ್ತಷ್ಟು ಪರಿಗಣನೆಗಾಗಿ ಇರಿಸಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.
 
 ಏಷ್ಯಾ ಕಪ್ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯ ಜಯದಲ್ಲಿ ತಂಡಗಳನ್ನು ಮುನ್ನಡೆಸಿರುವ ರವಿ ಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅವರು ಈ ಹುದ್ದೆಗೆ ಮುಂಚೂಣಿಯಲಿದ್ದಾರೆಂದು ಭಾವಿಸಲಾಗಿದೆ. ಶಾಸ್ತ್ರಿ ಮತ್ತು ಪಾಟಿಲ್ ಬಳಿಕ ಮಾಜಿ ವೇಗಿಗಳಾದ ಬಲ್ವೀಂದರ್ ಸಿಂಗ್ ಸಾಂಧು ಮತ್ತು  ವೆಂಕಟೇಶ್ ಪ್ರಸಾದ್ ಮತ್ತು ಎಡಗೈ ಮಧ್ಯಮಕ್ರಮಾಂಕ ಬ್ಯಾಟ್ಸ್‌ಮನ್ ಕಾನಿಟ್ಕರ್ ಕೂಡ ಸೇರಿದ್ದಾರೆ.

ಆದಾಗ್ಯೂ ಶಾಸ್ತ್ರಿ ಬೆಂಬಲಿಗರ ಸಿಬ್ಬಂದಿ ಭರತ್ ಅರುಣ್, ಆರ್. ಶ್ರೀಧರ್ ಮತ್ತು ಸಂಜಯ್ ಬಂಗಾರ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಿಲ್ಲ. ಆದರೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನ ವಿಶೇಷ ಕೋಚ್‌ಗಳ ಎರಡನೇ ಹಂತದ ಬಿಸಿಸಿಐ ನೇಮಕಾತಿಗಾಗಿ ಅವರು ಬಹುಶಃ ಕಾಯುತ್ತಿರಬಹುದೆಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ