ಭಾರತ-ಇಂಗ್ಲೆಂಡ್ ಅಂತಿಮ ಹಣಾಹಣಿ: ಇಂದಾದರೂ ರನ್ ಹರಿದು ಬಂದರೆ ಸಾಕಪ್ಪಾ..!

ಕೃಷ್ಣವೇಣಿ ಕೆ

ಬುಧವಾರ, 1 ಫೆಬ್ರವರಿ 2017 (08:53 IST)
ಬೆಂಗಳೂರು: ಭಾರತ ವಿಶ್ವದಲ್ಲೇ ಬಲಿಷ್ಠ ಬ್ಯಾಟಿಂಗ್ ಉಳ್ಳ ತಂಡ. ಪ್ರತಿಯೊಬ್ಬ ಬ್ಯಾಟ್ಸ್ ಮನ್ ಗಳೂ ನಿಂತು ಆಡಿದರೆ 20 ಓವರ್ ಗಳಲ್ಲಿ 50 ಓವರ್ ಗಳಲ್ಲಿ ಮಾಡುವಷ್ಟು ರನ್ ಮಾಡುವ ಸಾಮರ್ಥ್ಯವಿದೆ. ಆದರೂ ಯಾಕೋ ಟಿ20 ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಕ್ಲಿಕ್ ಆಗುತ್ತಿಲ್ಲ.

 
ನಮ್ಮಲ್ಲಿ ನಿಂತು ಆಡುವವರಿದ್ದಾರೆ ಅದೇ ಪ್ರಾಬ್ಲಂ. ಆರಂಭ ಉತ್ತಮವಾಗಿಲ್ಲ ಎನ್ನುವುದು ಇನ್ನೊಂದು ತಲೆನೋವು.  ಟಿ20 ಪಂದ್ಯವೆಂದರೆ ಹೊಡೆ ಬಡಿಯ ಆಟ. ಇಲ್ಲಿ ಪ್ರತೀ ಬಾಲ್ ನ್ನು ಬೌಂಡರಿ ಗೆರೆ ದಾಟಿಸುವುದು ಹೇಗೆಂದು ಬ್ಯಾಟ್ಸ್ ಮನ್ ಆಲೋಚಿಸುತ್ತಿರಬೇಕು. ಆದರೆ ಭಾರತದ ದೊಡ್ಡ ಸಮಸ್ಯೆಯೆಂದರೆ ಆರಂಭ.

ಆರಂಭದಿಂದಲೂ ವಿಕೆಟ್ ಉಳಿಸಿಕೊಳ್ಳುವುದನ್ನೇ ನೋಡಬೇಕು. ವೃತ್ತಿಪರ ಆರಂಭಿಕರಿಲ್ಲದ ಕಾರಣ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುತ್ತಾರೆ. ಆದರೆ ಅವರು ಒಂದೆರಡು ಹೊಡೆತಕ್ಕೆ ಕೈ ಹಾಕುವಷ್ಟರಲ್ಲಿ ಔಟಾಗಿ ಬಿಡುತ್ತಾರೆ. ಕೊಹ್ಲಿ ಔಟಾದೊಡನೆ ಎದುರಾಳಿಗಳು ಅರ್ಧ ಮೇಲುಗೈ ಸಾಧಿಸಿದ ಆತ್ಮ ವಿಶ್ವಾಸ ಪಡೆಯುತ್ತಾರೆ.

ಆರಂಭಿಕ ವಿಕೆಟ್ ಬಿದ್ದ ತಕ್ಷಣ ಮೂರನೇ ಕ್ರಮಾಂಕದ ಬ್ಯಾಟ್ಸ್ ಮನ್ ಬೀಡು ಬೀಸಾಗಿ ಬ್ಯಾಟ್ ಬೀಸಿ ರನ್ ಗತಿ ಹೆಚ್ಚಿಸುವತ್ತ ಗಮನ ಹರಿಸಬೇಕು. ಆದರೆ ಇಲ್ಲಿ ಅಷ್ಟೊಂದು ಫಾರ್ಮ್ ನಲ್ಲಿಲ್ಲದ ಸುರೇಶ್ ರೈನಾ ಕ್ರೀಸ್ ಗೆ ಬಂದು ತಮ್ಮ ವಿಕೆಟ್ ಉಳಿಸಿಕೊಳ್ಳುವುದು ಹೇಗೆಂದು ನೋಡಿಕೊಳ್ಳುತ್ತಿರುತ್ತಾರೆ. ಆ ವೇಳೆಗೆ ಇನ್ನೊಬ್ಬ ಆರಂಭಿಕನೂ ಬಂದರೆ ಯುವರಾಜ್ ಬರುತ್ತಾರೆ. ಅವರೂ ಬಂದ ಕೂಡಲೇ ಹೊಡೆಯುವ ಜಾಯಮಾನದವರಲ್ಲ.

ಇಷ್ಟೆಲ್ಲಾ ಆಗುವ ಹೊತ್ತಿಗೆ ರನ್ ರೇಟ್ ಪಾತಾಳದಲ್ಲಿರುತ್ತದೆ, ಓವರ್ 15 ದಾಟಿರುತ್ತದೆ. ಆಗ ಬರುವ ಇನ್ ಫಾರ್ಮ್ ಧೋನಿ ಏನೂ ಮಾಡಲಾಗದೇ ಅಸಹಾಯಕರಾಗಿ ಇನ್ನೊಂದು ತುದಿಯಲ್ಲಿ ವಿಕೆಟ್ ಉರುಳುವುದನ್ನೇ ನೋಡುತ್ತಿರುತ್ತಾರೆ. ಯಾಕೆಂದರೆ ಕೊನೆಯಲ್ಲಿ ಬರುವ ಆಲ್ ರೌಂಡರ್ ಗಳ ಮೇಲೆ ಕಡಿಮೆ ಬಾಲ್ ನಲ್ಲಿ ಗರಿಷ್ಠ ರನ್ ಗಳಿಸುವ ಒತ್ತಡವಿರುತ್ತದೆ. ಭಾರತಕ್ಕೆ ಕಳೆದ ಎರಡು ಪಂದ್ಯಗಳಲ್ಲೂ ಕಾಡಿದ್ದು ಇದೇ ಸಮಸ್ಯೆ.

ಒಂದೋ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದಂತೆ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಬೇಕು. ಇಲ್ಲದಿದ್ದರೆ, ಹೊಸಬ ರಿಷಬ್ ಪಂತ್, ಮುಂತಾದವರಿಗೆ ಅವಕಾಶ ನೀಡಬೇಕು.  ಹೇಳಿ ಕೇಳಿ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟ್ಸ್ ಮನ್ ಗಳ ಸ್ವರ್ಗ.  ಕಳೆದೆರಡು ಪಂದ್ಯಗಳಂತೆ ಇಲ್ಲಿಯೂ ಮೊದಲು ಬ್ಯಾಟಿಂಗ್ ಮಾಡಿದರೆ ದೊಡ್ಡ ಮೊತ್ತ ಗಳಿಸಲೇ ಬೇಕು. ಇಲ್ಲದಿದ್ದರೆ ಪಂದ್ಯ ಸೋತಂತೆಯೇ.

ಭಾರತಕ್ಕೆ ಬೌಲಿಂಗ್ ನದ್ದು ಅಷ್ಟು ಸಮಸ್ಯೆಯಿಲ್ಲ. ಅರೆಕಾಲಿಕ ಬೌಲರ್ ಗಳೂ ಉತ್ತಮವಾಗಿಯೇ ಬೌಲ್ ಮಾಡಿದ್ದಾರೆ. ಆದರೆ ಅವರಿಗೆ ಡಿಫೆಂಡ್ ಮಾಡುವಷ್ಟು ಮೊತ್ತ ಸಿಗುತ್ತಿಲ್ಲ ಎನ್ನುವುದೇ ಸಮಸ್ಯೆ. ಅತ್ತ ಈ ಎಲ್ಲಾ ವಿಷಯದಲ್ಲಿ ಇಂಗ್ಲೆಂಡ್ ಮೇಲುಗೈ ಹೊಂದಿದೆ. ಅವರಲ್ಲಿ ಉತ್ತಮ ಬೌಲರ್ ಗಳಿದ್ದಾರೆ. ಕಿರು ಮಾದರಿಗೆ ಹೇಳಿ ಮಾಡಿಸಿದಂತಹ ಆಲ್ ರೌಂಡರ್ ಬೆನ್ ಸ್ಟೋಕ್ಸ್,  ಮಧ್ಯಮ ಕ್ರಮಾಂಕವನ್ನು ಆಧರಿಸುವಂತಹ ನಾಯಕ ಇಯಾನ್ ಮಾರ್ಗನ್ ಮತ್ತು ಜೋ ರೂಟ್ ಇದ್ದಾರೆ. ಒಂದೇ ಒಂದು ಸಮಸ್ಯೆಯೆಂದರೆ ಅದೃಷ್ಟ.

ನಾಳೆಯೂ ಕೊಹ್ಲಿ ಬಳಗ ಕಿರು ಮಾದರಿಗೆ ತಕ್ಕ ಆಟವಾಡದಿದ್ದರೆ ಸರಣಿ ಸೋಲು ತಪ್ಪಿಸಲಾಗದು. ಯಾಕೆಂದರೆ ಕಳೆದ ಪಂದ್ಯ ಗೆದ್ದಿದ್ದೇ ಒಂದು ಪವಾಡ. ಅದು ಪ್ರತೀ ಬಾರಿಯೂ ಆಗಬೇಕೆಂದೇನಿಲ್ಲವಲ್ಲಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ