ಐತಿಹಾಸಿಕ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿಗೆ ದಾಖಲೆ ಬರೆಯುವ ಅವಕಾಶ
ಬುಧವಾರ, 1 ಆಗಸ್ಟ್ 2018 (09:08 IST)
ಎಡ್ಜ್ ಬಾಸ್ಟನ್: ಇಂಗ್ಲೆಂಡ್ ಮತ್ತು ಭಾರತದ ನಡುವೆ ಇಂದು ಎಡ್ಜ್ ಬಾಸ್ಟನ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯವಾಗಲಿದೆ.
ಇಂದು ಇಂಗ್ಲೆಂಡ್ 1000 ನೇ ಟೆಸ್ಟ್ ಪಂದ್ಯವಾಡುತ್ತಿದ್ದು, ಈ ದಾಖಲೆ ಬರೆದ ವಿಶ್ವದ ಮೊದಲ ಕ್ರಿಕೆಟ್ ತಂಡವೆನಿಸಲಿದೆ. ಆದರೆ ಈ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ನಾಯಕ ವಿರಾಟ್ ಕೊಹ್ಲಿ ಸೌರವ್ ಗಂಗೂಲಿ ಅವರ ಅತೀ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ನಾಯಕ ಎಂಬ ದಾಖಲೆ ಮುರಿಯಲಿದ್ದಾರೆ.
ತಮ್ಮ ನಾಯಕತ್ವದಲ್ಲಿ 21 ಗೆಲುವು ಸಾಧಿಸಿರುವ ಕೊಹ್ಲಿ ಗಂಗೂಲಿ ಜತೆಗೆ ದಾಖಲೆ ಹಂಚಿಕೊಂಡಿದ್ದಾರೆ. ಆದರೆ ಎಡ್ಜ್ ಬಾಸ್ಟನ್ ಭಾರತದ ಪಾಲಿಗೆ ಸುಲಭ ತುತ್ತಲ್ಲ. ಇದೇ ಮೈದಾನದಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ 710 ರನ್ ಗಳ ದಾಖಲೆ ಮಾಡಿತ್ತು.
ಮುಖ್ಯವಾಗಿ ಇಲ್ಲಿ ವೇಗಿಗಳನ್ನು ಭಾರತೀಯ ಬ್ಯಾಟ್ಸ್ ಮನ್ ಗಳು ಹೇಗೆ ಎದುರಿಸುತ್ತಾರೆಂಬುದರ ಮೇಲೆ ಪಂದ್ಯದ ಯಶಸ್ಸು ಅಡಗಿದೆ. ಇನ್ನು ಎದುರಾಳಿಗಳ ಬ್ಯಾಟಿಂಗ್ ಕೂಡಾ ಸದೃಢವಾಗಿದೆ. ಹಾಗಾಗಿ ಟೀಂ ಇಂಡಿಯಾ ಆಲ್ ರೌಂಡರ್ ಪ್ರದರ್ಶನವಿತ್ತರೆ ಮಾತ್ರ ಗೆಲುವು ಸಾಧ್ಯ.
ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.30 ರಿಂದ ಆರಂಭವಾಗಲಿದ್ದು, ಸೋನಿ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.