Ind Vs Aus ODI: ಹಿಟ್‌ಮ್ಯಾನ್‌, ಕಿಂಗ್‌ಕೊಹ್ಲಿ ತಂಡಕ್ಕೆ ವಾಪಾಸ್ಸಾದರು ನಡೆಯದ ಮ್ಯಾಜಿಕ್‌

Sampriya

ಭಾನುವಾರ, 19 ಅಕ್ಟೋಬರ್ 2025 (16:43 IST)
Photo Credit X
ಪರ್ತ್‌: ಮಳೆಯಿಂದ ಅಡಚಣೆ ಉಂಟಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತ ತಂಡವನ್ನು ಡಿಎಲ್‌ಎಸ್‌ ನಿಯಮದನ್ವಯ ಏಳು ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು. 

ಪರ್ತ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸಿಸ್​ ನಾಯಕ ಮಿಚೆಲ್ ಮಾರ್ಷ್ ಅವರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು.  ಭಾರತದ ಇನಿಂಗ್ಸ್‌ ವೇಳೆ ಪದೇ ಪದೇ ಮಳೆ ಅಡಚಣೆ ಉಂಟು ಮಾಡಿತು.

ಮಳೆಯಿಂದಾಗಿ ಪಂದ್ಯವನ್ನು 26 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಭಾರತ ತಂಡವು  9 ವಿಕೆಟ್​ಗೆ 137 ರನ್​ ಗಳಿಸಿತು. ಡಿಎಲ್‌ಎಸ್‌ ನಿಯಮದನ್ವಯ ಆಸ್ಟ್ರೇಲಿಯಾ ತಂಡಕ್ಕೆ ಗುರಿಯನ್ನು 131ಕ್ಕೆ ಪರಿಷ್ಕರಿಸಲಾಯಿತು.

ಈ ಗುರಿಯನ್ನು ಆಸ್ಟ್ರೇಲಿಯಾ ತಂಡವು ಇನ್ನೂ 29 ಎಸೆತಗಳು ಬಾರಿ ಇರುವಂತೆ 3 ವಿಕೆಟ್‌ಗೆ 131 ರನ್‌ ಗಳಿಸಿ ಸುಲಭ ಜಯ ಸಾಧಿಸಿತು. ನಾಯಕ ಮಿಚೆಲ್‌ ಮಾರ್ಷ್‌ (ಔಟಾಗದೇ 45)  ತಂಡಕ್ಕೆ ಆಸರೆಯಾದರು. ಭಾರತದ ಪರ ಅರ್ಷದೀಪ್‌ ಸಿಂಗ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಅಕ್ಷರ್‌ ಪಟೇಲ್‌ ತಲಾ ಒಂದು ವಿಕೆಟ್‌ ಪಡೆದರು. 

ಇದಕ್ಕೂ ಮೊದಲು ‌ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ್ದ​ ರೋಹಿತ್ ಶರ್ಮಾ 500ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ಎಂಟು ತಿಂಗಳ ಬಳಿಕ ಭಾರತ ತಂಡಕ್ಕೆ ಆಡಿದ ಅವರು ಕೇವಲ 8 ರನ್‌ಗಳಿಗೆ ಔಟಾದರು. ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಖಾತೆ ತೆರೆಯುವ ಮುನ್ನ ಪೆವಿಲಿಯನ್ ಸೇರಿಕೊಂಡರು.

ಶುಭಮನ್‌ ಗಿಲ್ ಅವರಿಗೆ ಏಕದಿನ ತಂಡದ ನಾಯಕನಾಗಿ ಮೊದಲ ಪಂದ್ಯವಾಗಿತ್ತು. ಅವರೂ 10 ರನ್‌ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು.  ಈ ಮೂವರು ಔಟ್ ಆಗುತ್ತಿದ್ದಂತೆ ಭಾರತ ರನ್​ಗಳು ಕುಸಿಯಿತು.

ಶ್ರೇಯಸ್ ಅಯ್ಯರ್ 11, ಅಕ್ಷರ್ ಪಟೇಲ್ 31, ಕೆ.ಎಲ್. ರಾಹುಲ್​ 38, ಸುಂದರ್ 10, ನಿತೀಶ್ ಕುಮಾರ್ 19, ಹರ್ಷಿತ್ ರಾಣಾ 1, ಅರ್ಷ್​ದೀಪ್ ಸಿಂಗ್ ಡಕೌಟ್​, ಸಿರಾಜ್ ಅಜೇಯ ಈ ಎಲ್ಲರ ಬ್ಯಾಟಿಂಗ್​ನಿಂದ ಟೀಮ್ ಇಂಡಿಯಾ 26 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್​ಗಳ ಟಾರ್ಗೆಟ್ ಅನ್ನು ಸೆಟ್ ಮಾಡಿದೆ.

ರೋಹಿತ್‌ ಶರ್ಮಾ ಅವರು ಟೆಸ್ಟ್‌, ಏಕದಿನ ಮತ್ತು ಟಿ20 ಮಾದರಿಯಲ್ಲಿ ಒಟ್ಟು 500 ಪಂದ್ಯ ಆಡಿದರು. ಅವರು 42.18ರ ಸರಾಸರಿಯಲ್ಲಿ 11,168 ರನ್ ಗಳಿಸಿದ್ದಾರೆ. ಇದರಲ್ಲಿ 49 ಶತಕಗಳು ಮತ್ತು 108 ಅರ್ಧಶತಕಗಳು ಸೇರಿವೆ. 264 ಅವರ ಅತ್ಯುತ್ತಮ ಸ್ಕೋರ್ ಆಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ