ಭಾರತ-ದ.ಆಫ್ರಿಕಾ ಟಿ20: ಗೆಲುವಿನೊಂದಿಗೆ ಟೀಂ ಇಂಡಿಯಾ ಮಾಡಿದ ದಾಖಲೆಗಳು
ಶುಕ್ರವಾರ, 15 ಡಿಸೆಂಬರ್ 2023 (08:20 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಕೊನೆಯ ಟಿ20 ಪಂದ್ಯವನ್ನು 106 ರನ್ ಗಳಿಂದ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಹಲವು ದಾಖಲೆಗಳನ್ನು ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಶತಕದ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. 56 ಎಸೆತ ಎದುರಿಸಿದ ಸೂರ್ಯ ಭರ್ತಿ 100 ರನ್ ಗಳಿಸಿ ಔಟಾದರು. ಯಶಸ್ವಿ ಜೈಸ್ವಾಲ್ 60 ರನ್ ಗಳಿಸಿದರು. ಸೂರ್ಯಕುಮಾರ್ ಪಾಲಿಗೆ ಇದು 4 ನೇ ಟಿ20 ಶತಕವಾಗಿತ್ತು.
ಭಾರತ ನೀಡಿದ 202 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಆಫ್ರಿಕಾ 13.5 ಓವರ್ ಗಳಲ್ಲೇ 95 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಮಿಂಚಿದ ಸ್ಪಿನ್ನರ್ ಕುಲದೀಪ್ ಯಾದವ್ 5 ವಿಕೆಟ್ ಗಳ ಗೊಂಚಲು ಪಡೆದರು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿತು.
ಈ ಗೆಲುವಿನ ಜೊತೆಗೆ ಭಾರತದ ಕೆಲವೊಂದು ದಾಖಲೆಗಳನ್ನು ಮಾಡಿತು. ಟಿ20 ಕ್ರಿಕೆಟ್ ನಲ್ಲಿ ರನ್ ಅಂತರದಲ್ಲಿ ಭಾರತ ಮೂರನೇ ಅತೀ ದೊಡ್ಡ ಗೆಲುವು ಇದಾಯಿತು. ಟಿ20 ಕ್ರಿಕೆಟ್ ನಲ್ಲಿ ಕುಲದೀಪ್ ಯಾದವ್ ಭಾರತದ ಪರ ಎರಡನೇ ಬಾರಿ 5 ವಿಕೆಟ್ ಪಡೆದ ದಾಖಲೆ ಮಾಡಿದರು. ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.