ಮುಂಬೈ: ಒಂದೆಡೆ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಉಳಿಸಿಕೊಳ್ಳಲು ಇಂದು ನಿರ್ಣಾಯಕ ಪಂದ್ಯವಾಗಿದ್ದರೆ ಇತ್ತ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೂ ಏಕದಿನ ವಿಶ್ವಕಪ್ 2025 ರಲ್ಲಿ ಮುಂದಿನ ಹಾದಿ ಸುಗಮವಾಗಬೇಕಾದರೆ ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡವಿದೆ.
ಭಾರತ ಮಹಿಳಾ ಕ್ರಿಕೆಟಿಗರು ಕಳೆದ ಮೂರು ಪಂದ್ಯಗಳನ್ನು ಸತತವಾಗಿ ಸೋತಿದ್ದು ಇದೀಗ ಟಾಪ್ 4 ರೊಳಗೆ ಸ್ಥಾನ ಪಡೆಯಲು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಇಂದು ನ್ಯೂಜಿಲೆಂಡ್ ವಿರುದ್ಧ ಡಿವೈ ಪಾಟೀಲ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.
ಕಳೆದ ಮೂರು ಪಂದ್ಯಗಳಲ್ಲಿ ಸೋತಿರುವ ಭಾರತ ಮಹಿಳೆಯರು ಇದೀಗ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದು ವೇಳೆ ಇಂದಿನ ಪಂದ್ಯ ಸೋತರೆ ಭಾರತ ಐದನೇ ಸ್ಥಾನಕ್ಕೆ ಜಾರಲಿದ್ದು, ಈಗ ಐದನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಟಾಪ್ 4 ರೊಳಗೆ ಸ್ಥಾನ ಪಡೆಯಲಿದೆ.
ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಬಹುತೇಕ ಟೂರ್ನಿಯಿಂದ ಹೊರಬಿದ್ದಿವೆ. ಇದೀಗ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿಯಿದೆ. ಹೀಗಾಗಿ ಈ ಪಂದ್ಯಕ್ಕೆ ಸೆಮಿಫೈನಲ್ ಕಳೆ ಬಂದಿದೆ.
ಇನ್ನು ಭಾರತ ತಂಡದ ಪರಿಸ್ಥಿತಿ ನೋಡುವುದಾದರೆ ಕಳೆದ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಪಂದ್ಯವನ್ನು ಕೊನೆಯ ಕ್ಷಣದಲ್ಲಿ ಕಳೆದುಕೊಂಡಿದೆ. ಎರಡು ಪಂದ್ಯಗಳಲ್ಲಿ ದಿಡೀರ್ ಬ್ಯಾಟಿಂಗ್ ಕುಸಿತವೇ ತಂಡದ ಸೋಲಿಗೆ ಕಾರಣವಾಗಿದೆ. ಈ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಪ್ರದರ್ಶನ ತೋರದೇ ಇದ್ದರೆ ತವರಿನಲ್ಲಿ ನಡೆಯುತ್ತಿರುವ ಈ ಏಕದಿನ ವಿಶ್ವಕಪ್ ಯಾತ್ರೆ ಇಂದಿಗೇ ಕೊನೆಯಾಗಲಿದೆ. ಈ ಪಂದ್ಯ ಇಂದು ಅಪರಾಹ್ನ 3 ಗಂಟೆಗೆ ಆರಂಭವಾಗುವುದು.