IND vs IRE ODI: ODIನಲ್ಲಿ ಪುರುಷರ ತಂಡವನ್ನೂ ಹಿಂದಿಕ್ಕಿ ಬೃಹತ್ ಮೊತ್ತ ಪೇರಿಸಿದ ಭಾರತ ಮಹಿಳಾ ತಂಡ
ಸ್ಮೃತಿ ಮಂಧನಾ ನೇತೃತ್ವದ ಭಾರತ ಮಹಿಳಾ ತಂಡ ಇಂದು ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 435 ರನ್ ಗಳಿಸಿತ್ತು. ಇದು ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಪುರುಷರ ತಂಡವನ್ನೂ ಈ ಮೂಲಕ ಮಹಿಳೆಯವರು ಮೀರಿಸಿದ್ದಾರೆ.
ಭಾರತದ ಪುರುಷರ ತಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ 5 ವಿಕೆಟ್ ನಷ್ಟಕ್ಕೆ 418 ರನ್ ಗಳಿಸಿದ್ದು ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಆದರೆ ಈಗ ಮಹಿಳೆಯರ ತಂಡ ಆ ಮೊತ್ತವನ್ನೂ ಮೀರಿ ದಾಖಲೆ ಮಾಡಿದೆ.
ಇದಕ್ಕೆ ಕಾರಣವಾಗಿದ್ದು ಸ್ವತಃ ನಾಯಕಿ ಸ್ಮೃತಿ ಮಂಧಾನಾ ಮತ್ತು ಮತ್ತೊಬ್ಬ ಆರಂಭಿಕ ಆಟಗಾರ್ತಿ ಪ್ರತೀಕ ರಾವಲ್ ಭರ್ಜರಿ ಬ್ಯಾಟಿಂಗ್. ಈ ಇಬ್ಬರೂ ಮೊದಲ ವಿಕೆಟ್ ಗೆ 233 ರನ್ ಗಳ ಬೃಹತ್ ಮೊತ್ತ ಪೇರಿಸಿದರು. ಸ್ಮೃತಿ 80 ಎಸೆತಗಳಲ್ಲಿ 135 ರನ್ ಗಳಿಸಿ ಔಟಾದರು. ಈ ಮೂಲಕ ಅವರು ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ ವೇಗದ ಶತಕ ಗಳಿಸಿದ ದಾಖಲೆ ಮಾಡಿದರು. ಇನ್ನೊಂದೆಡೆ ಪ್ರತೀಕ 129 ಎಸೆತಗಳಿಂದ 154 ರನ್ ಗಳಿಸಿದರು. ಇದರೊಂದಿಗೆ ಭಾರತ ಮಹಿಳಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.