ಚೆನ್ನೈ: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಮೊದಲ ಸೋಲು ಕಂಡಿದೆ. ಸಿಎಸ್ ಕೆ ವಿರುದ್ಧ 7 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಕೆಕೆಆರ್ ಅಗ್ರ ಕ್ರಮಾಂಕಕ್ಕೆ ಅಂಕುಶ ಹಾಕಿದ್ದ ತುಷಾರ್ ದೇಶ್ ಪಾಂಡೆ ಮತ್ತು ರವೀಂದ್ರ ಜಡೇಜಾ. ಇಬ್ಬರೂ ತಲಾ 3 ವಿಕೆಟ್ ಕಬಳಿಸಿ ಕೆಕೆಆರ್ ಬ್ಯಾಟಿಂಗ್ ಹಳಿ ತಪ್ಪುವಂತೆ ಮಾಡಿದರು.
ಹಾಗಿದ್ದರೂ ಅನುಭವಿ ಸುನಿಲ್ ನರೈನ್ 27, ಅಂಗ್ ಕೃಶ್ ರಘುವಂಶಿ 24 ಮತ್ತು ನಾಯಕ ಶ್ರೇಯಸ್ ಅಯ್ಯರ್ 34 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ಗಳಿಸಲು ನೆರವಾದರು. ಈ ಟೂರ್ನಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಕೆಕೆಆರ್ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು.
ಈ ಮೊತ್ತ ಬೆನ್ನತ್ತಿದ ಸಿಎಸ್ ಕೆ ನಾಯಕ ಋತುರಾಜ್ ಗಾಯಕ್ ವಾಡ್ ಆಸರೆಯಾದರು. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಸ್ವತಃ ನಾಯಕನೇ ನೆರವಾಗಿ ನಿಂತರು. ಒಟ್ಟು 58 ಎಸೆತ ಎದುರಿಸಿದ ಋತುರಾಜ್ ಅಜೇಯ 67 ರನ್ ಗಳಿಸಿದರೆ ಡೆರಿಲ್ ಮಿಚೆಲ್ 25, ಶಿವಂ ದುಬೆ 28 ರನ್ ಗಳಿಸಿ ಸಾಥ್ ನೀಡಿದರು. ಇದರೊಂದಿಗೆ ಸಿಎಸ್ ಕೆ 17.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಗೆಲುವು ಕಂಡಿತು.