ಬೆಂಗಳೂರು: ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರಣ ಎಂದು ಅವಹೇಳನ ಮಾಡಿದ ಕಿಡಿಗೇಡಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ಐಪಿಎಲ್ 2024 ರಲ್ಲಿ ಆರ್ ಸಿಬಿ ಸತತವಾಗಿ ಸೋಲುತ್ತಿರುವುದಕ್ಕೆ ಅಶ್ವಿನ್ ಪುನೀತ್ ರಾಜ್ ಕುಮಾರ್ ರನ್ನು ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೆ ಕರೆತಂದಿದ್ದು ಕಾರಣ ಎಂದು ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರೀ ಪೋಸ್ಟ್ ಮಾಡಿದ್ದರು.
ಅವರ ಈ ಪೋಸ್ಟ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆರ್ ಸಿಬಿ ಅನ್ ಬಾಕ್ಸ್ ನಲ್ಲಿ ಅಶ್ವಿನಿಗೆ ತಂಡದ ಜೆರ್ಸಿ ನೀಡಿ ಗೌರವಿಸಲಾಗಿತ್ತು. ಬಳಿಕ ತಂಡದ ಹೆಸರು ಪುನರ್ ನಾಮಕರಣದಲ್ಲೂ ಅಶ್ವಿನಿ ಅವರ ಪ್ರೋಮೋ ಮಾಡಲಾಗಿತ್ತು. ಇದಕ್ಕೆ ಗಜಪಡೆ ಎನ್ನುವ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅವಹೇಳನಕಾರೀ ಪೋಸ್ಟ್ ಹಾಕಲಾಗಿತ್ತು. ಇದು ವಿವಾದವಾಗುತ್ತಿದ್ದಂತೇ ತಮ್ಮ ಸೋಷಿಯಲ್ ಮೀಡಿಯಾ ಹೆಸರನ್ನು ಸುದೀಪ್ ಅಭಿಮಾನಿ ಎಂದು ಕಿಡಿಗೇಡಿಗಳು ಬದಲಾಯಿಸಿದ್ದರು.
ಕಿಡಿಗೇಡಿಗಳ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಪೊಲೀಸ್ ಕಮಿಷನರ್ ಭೇಟಿ ಮಾಡಿ ದೂರು ನೀಡಿದ್ದರು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.