ಬೆಂಗಳೂರು: ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಪ್ರದರ್ಶನ ನೀಡುತ್ತಿದೆ. ಸ್ಟಾರ್ ಬ್ಯಾಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ಬಗ್ಗೆ ತೀರಾ ಟೀಕೆ ಕೇಳಿಬಂದಿತ್ತು.
ಇದುವರೆಗೆ ಮ್ಯಾಕ್ಸ್ ವೆಲ್ ಬ್ಯಾಟ್ ನಿಂದ ರನ್ ಹರಿದುಬಂದಿರಲಿಲ್ಲ. ನಿನ್ನೆಯ ಪಂದ್ಯದಲ್ಲಿ ಅವರನ್ನು ಆಡುವ ಬಳಗದಲ್ಲಿ ಆಯ್ಕೆ ಮಾಡಲಾಗಿರಲಿಲ್ಲ. ಹೀಗಾಗಿ ಎಲ್ಲರಿಗೂ ಅಚ್ಚರಿಯಾಗಿತ್ತು. ಆರ್ ಸಿಬಿಯ ಪ್ರಮುಖ ಬ್ಯಾಟಿಗರಲ್ಲಿ ಮ್ಯಾಕ್ಸ್ ವೆಲ್ ಕೂಡಾ ಒಬ್ಬರು. ಆದರೆ ಅವರನ್ನು ಆಡುವ ಬಳಗದಿಂದ ಹೊರಗಿಟ್ಟಿದ್ದರಿಂದ ಎಲ್ಲರಿಗೂ ಅನುಮಾನವಾಗಿತ್ತು.
ಇದೀಗ ಆ ಅನುಮಾನಗಳಿಗೆ ಅವರೇ ಉತ್ತರ ನೀಡಿದ್ದಾರೆ. ಈ ಟೂರ್ನಮೆಂಟ್ ನಲ್ಲಿ ಕಳಪೆ ಫಾರ್ಮ್ ನಲ್ಲಿರುವ ಕಾರಣಕ್ಕೆ ಸ್ವತಃ ಗ್ಲೆನ್ ಮ್ಯಾಕ್ಸ್ ವೆಲ್ ತಂಡದ ನಾಯಕ ಫಾ ಡು ಪ್ಲೆಸಿಸ್ ಮತ್ತು ಕೋಚ್ ಆಂಡಿ ಫ್ಲವರ್ ಗೆ ತಮ್ಮನ್ನು ಆಡುವ ಬಳಗದಿಂದ ಹೊರಗಿಡುವಂತೆ ತಾವೇ ಕೇಳಿಕೊಂಡಿದ್ದರಂತೆ.
ಕಳೆದ ಪಂದ್ಯದ ಬಳಿಕ ಫಾ ಮತ್ತು ಕೋಚ್ ಬಳಿಗೆ ಹೋಗಿ ನನ್ನ ಬದಲು ಬೇರೆ ಯಾರನ್ನಾದರೂ ಆಡಿಸುವುದು ಉತ್ತಮ ಎಂದು ತಿಳಿಸಿದೆ. ನಾನು ಬ್ಯಾಟ್ ನಿಂದ ತಂಡಕ್ಕೆ ಏನೂ ಕೊಡುಗೆ ಕೊಡುತ್ತಿಲ್ಲವೆನಿಸಿತು. ಹೀಗಾಗಿ ನನ್ನ ಬದಲು ಬೇರೆ ಯಾರಿಗಾದರೂ ಅವಕಾಶ ಕೊಡುವುದು ಉತ್ತಮ ಎಂದು ಹೇಳಿದೆ. ನನ್ನನ್ನು ಮುಂದಿನ ಕೆಲವು ಪಂದ್ಯಗಳಿಗೆ ತಂಡದ ಆಡುವ ಬಳಗಕ್ಕೆ ಪರಿಗಣಿಸದಿರಿ ಎಂದು ಕೇಳಿಕೊಂಡಿದ್ದೇನೆ ಎಂದಿದ್ದಾರೆ.
ಎಷ್ಟೇ ಫಾರ್ಮ್ ನಲ್ಲಿಲ್ಲದೇ ಹೋದರೂ ಯಾವುದೇ ಆಟಗಾರನೂ ಈ ರೀತಿ ತಾವಾಗಿಯೇ ಆಡುವ ಬಳಗದಿಂದ ಹೊರಗಿಡಲು ಮನವಿ ಮಾಡುವುದು ಅಪರೂಪವೇ. ಆ ನಿಟ್ಟಿನಲ್ಲಿ ಮ್ಯಾಕ್ಸ್ ವೆಲ್ ನಿರ್ಧಾರವನ್ನು ಆರ್ ಸಿಬಿ ಫ್ಯಾನ್ಸ್ ಕೊಂಡಾಡಿದ್ದಾರೆ. ತಾನು ಚೆನ್ನಾಗಿ ಆಡುತ್ತಿಲ್ಲವೆಂದಾಗ ಇನ್ನೊಬ್ಬರಿಗೆ ಸ್ಥಾನ ಬಿಟ್ಟುಕೊಡುವುದು ಸೂಕ್ತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮ್ಯಾಕ್ಸ್ ವೆಲ್ ನಿನ್ನೆಯ ಪಂದ್ಯದಿಂದ ಹೀಗಾಗಿಯೇ ಹೊರಗಿದ್ದರು. ಹಾಗಿದ್ದರೂ ಪೆವಿಲಿಯನ್ ನಲ್ಲಿ ಕೂತು ತಂಡಕ್ಕೆ ಚಿಯರ್ ಅಪ್ ಮಾಡಿದ್ದರು. ವಿಪರ್ಯಾಸವೆಂದರೆ ಏನೇ ಪ್ರಯೋಗ ಮಾಡಿದರೂ ಆರ್ ಸಿಬಿ ಮತ್ತೊಮ್ಮೆ ಈ ಐಪಿಎಲ್ ನಲ್ಲಿ ಸೋಲು ತಪ್ಪಿಸಿಕೊಳ್ಳಲು ಸಾಧ‍್ಯವಾಗಿಲ್ಲ.