ಚೆನ್ನೈ: ಐಪಿಎಲ್ 2024 ರ ಫೈನಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದ ಕೆಕೆಆರ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ವಿಶೇಷವೆಂದರೆ ಈ ಮೂರೂ ಬಾರಿ ತಂಡದಲ್ಲಿ ಗೌತಮ್ ಗಂಭೀರ್ ಇದ್ದಿದ್ದು ವಿಶೇಷ. ಹೀಗಾಗಿ ಈಗ ಗಂಭೀರ್ ಎಂದರೆ ಕೆಕೆಆರ್ ಗೆ ಲಕ್ಕಿ ಚಾರ್ಮ್ ಎನ್ನಬಹುದು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 18.3 ಓವರ್ ಗಳಲ್ಲಿ 113 ರನ್ ಗಳಿಗೆ ಆಲೌಟ್ ಆಯಿತು. 24 ಕೋಟಿ ರೂ. ತೆತ್ತು ಖರೀದಿ ಮಾಡಿದ್ದ ಮಿಚೆಲ್ ಸ್ಟಾರ್ಕ್ ತಂಡಕ್ಕೆ ಹೊರೆಯಾಗಲಿಲ್ಲ. ಫೈನಲ್ ನಲ್ಲೂ 2 ವಿಕೆಟ್ ಕಬಳಿಸಿ ಗಂಭೀರ್ ಆಯ್ಕೆ ಸರಿ ಎಂದು ಸಮರ್ಥಿಸಿದರು. ಅವರಿಗೆ ಜೊತೆ ನೀಡಿದ ಆಂಡ್ರೆ ರಸೆಲ್ 3 ವಿಕೆಟ್ ಕಬಳಿಸಿದರು. ಹೈದರಾಬಾದ್ ಪರ ಇಷ್ಟು ದಿನ ಸಿಡಿಲಬ್ಬರ ಪ್ರದರ್ಶಿಸುತ್ತಿದ್ದ ಬ್ಯಾಟಿಂಗರು ಫೈನಲ್ ನಲ್ಲಿ ಥಂಡಾ ಹೊಡೆದರು. ಟ್ರಾವಿಸ್ ಹೆಡ್ ಶೂನ್ಯ, ಅಭಿಷೇಕ್ ಶರ್ಮ 2, ಹೆನ್ರಿಚ್ ಕ್ಲಾಸನ್ ಕೇವಲ 16 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಕೆಕೆಆರ್ ಕೇವಲ 10.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಮೂರನೇ ಬಾರಿಗೆ ಚಾಂಪಿಯನ್ ಆಯಿತು. ಆರಂಭಿಕ ರೆಹಮಾನುಲ್ಲಾ 39, ವೆಂಕಟೇಶ್ ಅಜೇಯ 52 ರನ್ ಸಿಡಿಸಿದರು.
ಈ ಐಪಿಎಲ್ ಟೂರ್ನಿಯುದ್ದಕ್ಕೂ ಸದ್ದು ಮಾಡಿದ ಸುನಿಲ್ ನರೈನ್ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದುಕೊಂಡರು. ಗಂಭೀರ್ ಸಲಹೆಯಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಅವರು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು. ಇನ್ನೊಂದೆಡೆ ಟೀಂ ಇಂಡಿಯಾದಿಂದ ಅವಗಣೆನೆಗೆ ಒಳಗಾಗಿದ್ದ ಶ್ರೇಯಸ್ ಅಯ್ಯರ್ ತಮ್ಮ ನಾಯಕತ್ವದಲ್ಲಿ ಚೊಚ್ಚಲ ಐಪಿಎಲ್ ಕಿರೀಟ ಹೊತ್ತು ಮೆರೆದಾಡಿದರು.