IPL 2024: ಮೂರನೇ ಬಾರಿಗೆ ಐಪಿಎಲ್ ಫೈನಲ್ ಗೆ ಸನ್ ರೈಸರ್ಸ್ ಹೈದರಾಬಾದ್

Krishnaveni K

ಶನಿವಾರ, 25 ಮೇ 2024 (08:24 IST)
Photo Courtesy: X
ಚೆನ್ನೈ: ಐಪಿಎಲ್ 2024 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 36 ರನ್ ಗಳಿಂದ ಸೋಲಿಸಿದ ಸನ್ ರೈಸರ್ಸ್ ಹೈದರಾಬಾದ್ ಮೂರನೇ ಬಾರಿಗೆ ಐಪಿಎಲ್ ಫೈನಲ್ ಗೇರಿದ ಸಾಧನೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಹೆನ್ರಿಚ್ ಕ್ಲಾಸನ್ 50, ಟ್ರಾವಿಸ್ ಹೆಡ್ 34, ರಾಹುಲ್ ತ್ರಿಪಾಠಿ 37 ರನ್ ಗಳಿಸಿದರು. ರಾಜಸ್ಥಾನ್ ಬೌಲಿಂಗ್ ಉತ್ತಮವಾಗಿತ್ತು. ಟ್ರೆಂಟ್ ಬೌಲ್ಟ್ ಮತ್ತು ಆವೇಶ್ ಖಾನ್ ತಲಾ 3 ವಿಕೆಟ್ ಕಬಳಿಸಿದರು. ಉಳಿದೆರಡು ವಿಕೆಟ್ ಸಂದೀಪ್ ಶರ್ಮಾ ಪಾಲಾಯಿತು.

ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ಗೆ ಬ್ಯಾಟಿಂಗ್ ಕೈಕೊಟ್ಟಿತು. ಯಶಸ್ವಿ ಜೈಸ್ವಾಲ್ 21 ಎಸೆತಗಳಿಂದ 42 ರನ್ ಸಿಡಿಸಿದರೂ ಉಳಿದ ಟಾಪ್ ಬ್ಯಾಟಿಗರು ವೈಫಲ್ಯಕ್ಕೊಳಗಾದರು. ಸಂಜು ಸ್ಯಾಮ್ಸನ್ 10, ರಿಯಾನ್ ಪರಾಗ್ 6 ರನ್ ಗಳಿಸಿ ಔಟಾದರು. ಆದರೆ ಧ್ರುವ್ ಜ್ಯುರೆಲ್ 56 ರನ್ ಗಳ ಕೊಡುಗೆ ನೀಡಿದರು. ಉಳಿದವರದ್ದು ಏಕಂಕಿ ಸಾಧನ. ಹೀಗಾಗಿ ರಾಜಸ್ಥಾನ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ಶಹಬಾಝ್ ಅಹಮ್ಮದ್ 3, ಅಭಿಷೇಕ್ ಶರ್ಮ 2, ವಿಕೆಟ್ ಕಬಳಿಸಿದರು.

ಈ ಗೆಲುವಿನೊಂದಿಗೆ ಹೈದರಾಬಾದ್ ಮೂರನೇ ಬಾರಿಗೆ ಐಪಿಎಲ್ ಫೈನಲ್ ಗೇರಿತು. ಇದೀಗ ಫೈನಲ್ ನಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ. ನಾಯಕರಾಗಿ ತಮ್ಮ ತಂಡದ ಪರ ಏಕದಿನ ವಿಶ್ವಕಪ್, ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ಪ್ಯಾಟ್ ಕುಮಿನ್ಸ್ ಈಗ ಐಪಿಎಲ್ ಫೈನಲ್ ನನ್ನೂ ಗೆಲ್ಲುವ ತವಕದಲ್ಲಿದ್ದಾರೆ. ಇತ್ತ ರಾಜಸ್ಥಾನ್ ಫೈನಲ್ ಗೇರಲಾಗದೇ ನಿರಾಸೆ ಅನುಭವಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ