ಐಪಿಎಲ್ 2024: ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಗೆ ಕೋಲ್ಕೊತ್ತಾ ನೈಟ್ ರೈಡರ್ಸ್

Krishnaveni K

ಬುಧವಾರ, 22 ಮೇ 2024 (08:30 IST)
Photo Courtesy: X
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಗೇರಿದೆ. ಪ್ಲೇ ಆಫ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಕೆಕೆಆರ್ ಫೈನಲ್ ಗೇರಿದೆ.

 ಈ ಕೂಟದಲ್ಲಿ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಗೇರಿದ್ದ ಕೆಕೆಆರ್ ಅದಕ್ಕೆ ತಕ್ಕ ಪ್ರದರ್ಶನ ನೀಡಿದೆ. ಇದೊಂದು ರೀತಿಯಲ್ಲಿ ಒನ್ ಸೈಡೆಡ್ ಪಂದ್ಯ ಎಂದೇ ಹೇಳಬಹುದು. ಇಷ್ಟು ದಿನ ಅಬ್ಬರಿಸುತ್ತಿದ್ದ ಹೈದರಾಬಾದ್ ಬ್ಯಾಟಿಂಗ್ ತಕ್ಕ ಸಮಯದಲ್ಲೇ ಕೈಕೊಟ್ಟಿತು. ಪರಿಣಾಮ ಎಸ್ ಆರ್ ಎಚ್ ಮೊದಲು ಬ್ಯಾಟಿಂಗ್ ಮಾಡಿ 19.3 ಓವರ್ ಗಳಲ್ಲಿ 159 ರನ್ ಗಳಿಗೆ ಆಲೌಟ್ ಆಯಿತು. ಅದ್ಭುತ ಫಾರ್ಮ್ ನಲ್ಲಿದ್ದ ಟ್ರಾವಿಸ್‍ ಹೆಡ್ ಶೂನ್ಯ, ಅಭಿಷೇಕ್ ಶರ್ಮಾ ಕೇವಲ 3 ರನ್ ಗಳಿಸಿ ಔಟಾಗಿದ್ದು ಹೈದರಾಬಾದ್ ಗೆ ಮುಳುವಾಯಿತು. ಆದರೆ ರಾಹುಲ್ ತ್ರಿಪಾಟಿ 55, ಹೆನ್ರಿಚ್ ಕ್ಲಾಸನ್ 32 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ಗಳಿಸಲು ನೆರವಾದರು. ಕೊನೆಯಲ್ಲಿ ನಾಯಕನ ಆಟವಾಡಿದ ಪ್ಯಾಟ್ ಕುಮಿನ್ಸ್ 30 ರನ್ ಗಳ ಕೊಡುಗೆ ನೀಡಿದರು. ಕೆಕೆಆರ್ ಪರ ಮಾರಕ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ 3, ವರುಣ್ ಚಕ್ರವರ್ತಿ 2 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ ನೀರು ಕುಡಿದಷ್ಟೇ ಸುಲಭವಾಗಿ ಈ ಮೊತ್ತ ಬೆನ್ನತ್ತಿತು. ಆರಂಭಿಕ ರೆಹಮಾನುಲ್ಲಾ ಗುರ್ಬಾಜ್ 23, ಸುನಿಲ್ ನರೈನ್ 21 ರನ್ ಗಳಿಸಿ ಔಟಾದರು. ಆದರೆ ನಂತರ ವೆಂಕಟೇಶ್ ಅಯ್ಯರ್ ಅಜೇಯ 51 ಮತ್ತು ನಾಯಕ ಶ್ರೇಯಸ್ ಅಯ್ಯರ್ ಅಜೇಯ 58 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಅಂತಿಮವಾಗಿ ಕೆಕೆಆರ್ 13.4 ಓವರ್ ಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು.

ಈ ಗೆಲುವಿನೊಂದಿಗೆ ಹತ್ತು ವರ್ಷದ ಬಳಿಕ ಕೆಕೆಆರ್ ಐಪಿಎಲ್ ಫೈನಲ್ ಗೇರಿದ ಸಾಧನೆ ಮಾಡಿತು. ಇದು ಕೆಕೆಆರ್ ತಂಡಕ್ಕೆ ನಾಲ್ಕನೇ ಐಪಿಎಲ್ ಫೈನಲ್ ಆಗಿದೆ. ಎರಡು ಬಾರಿ ಕೆಕೆಆರ್ ಚಾಂಪಿಯನ್ ಶಿಪ್ ಗೆದ್ದಿತ್ತು. ಇತ್ತ ಹೈದರಾಬಾದ್ ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದ ವಿಜೇತ ತಂಡದೊಂದಿಗೆ ಇನ್ನೊಂದು ಪಂದ್ಯವಾಡಬೇಕಿದೆ. ಈ ಪಂದ್ಯದಲ್ಲಿ ಗೆದ್ದರೆ ಹೈದರಾಬಾದ್ ಗೆ ಫೈನಲ್ ಗೇರುವ ಅವಕಾಶವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ