ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ 24 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕೊತ್ತಾ ನೈಟ್ ರೈಡರ್ಸ್ 19.5 ಓವರ್ ಗಳಲ್ಲಿ 169 ರನ್ ಗಳಿಗೆ ಆಲೌಟ್ ಆಯಿತು. ಕೆಕೆಆರ್ ಗೆ ಅಗ್ರಕ್ರಮಾಂಕದ ಬ್ಯಾಟಿಗರು ಕೈಕೊಟ್ಟರು. ಆದರೆ ಮಧ್ಯಮ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ 70 ರನ್ ಗಳಿಸಿದರೆ ಅವರಿಗೆ ಸಾಥ್ ನೀಡಿದ ಮನೀಶ್ ಪಾಂಡೆ 42 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಎನ್. ತುಷಾರ, ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಂಡ್ಯ 2 ವಿಕೆಟ್ ಗಳಿಸಿದರು.
ಈ ಸಣ್ಣ ಮೊತ್ತವನ್ನು ಮುಂಬೈ ಸುಲಭವಾಗಿಯೇ ಬೆನ್ನತ್ತಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಮುಂಬೈಗೆ ಅಗ್ರ ಕ್ರಮಾಂಕ ಕೈಕೊಟ್ಟಿತು. ಆದರೆ ಸೂರ್ಯಕುಮಾರ್ ಯಾದವ್ 56 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಅವರಿಗೆ ಕೊನೆಯಲ್ಲಿ ಟಿಮ್ ಡೇವಿಡ್ 24 ರನ್ ಗಳಿಸಿ ಕೊಂಚ ಸಾಥ್ ನೀಡಿದರು. ಆದರೆ ಉಳಿದವರಿಂದ ಸಾಥ್ ಸಿಗದೇ 18.5 ಓವರ್ ಗಳಲ್ಲಿ 145 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಕೆಕೆಆರ್ ಪರ ಮಾರಕ ದಾಳಿ ಸಂಘಟಿಸಿ ಮಿಚೆಲ್ ಸ್ಟಾರ್ಕ್ 4, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್ ತಲಾ 2 ವಿಕೆಟ್ ಕಬಳಿಸಿದರು.
ಇದರೊಂದಿಗೆ ಕೆಕೆಆರ್ ಮೊದಲ ಬಾರಿಗೆ ಮುಂಬೈಗೆ ತವರಿನಲ್ಲೇ ಸೋಲುಣಿಸಿತು. 11 ಪಂದ್ಯಗಳಿಂದ 3 ಪಂದ್ಯ ಸೋತ ಮುಂಬೈ 9 ನೇ ಸ್ಥಾನಕ್ಕೆ ಜಾರಿತು. ಕೆಕೆಆರ್ 10 ಪಂದ್ಯಗಳಿಂದ 7 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.