ಐಪಿಎಲ್ 2024: ಕೊನೆಯ ಓವರ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆ ಥ್ರಿಲ್ಲಿಂಗ್ ಗೆಲುವು

Krishnaveni K

ಶುಕ್ರವಾರ, 3 ಮೇ 2024 (08:38 IST)
Photo Courtesy: X
ಹೈದರಾಬಾದ್: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಕೊನೆಯ ಓವರ್ ನಲ್ಲಿ ಕೇವಲ 1 ರನ್ ನಿಂದ ಥ್ರಿಲ್ಲಿಂಗ್ ಗೆಲುವು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಟ್ರಾವಿಸ್ ಹೆಡ್ 58, ಅಭಿಷೇಕ್ ಶರ್ಮ 12, ಅನ್ಮೋಲ್ ಪ್ರೀತ್ ಸಿಂಗ್ 5 ರನ್ ಗಳಿಸಿದರು. ಆದರೆ ತಂಡದ ಮೊತ್ತ 200 ರ ಗಡಿ ದಾಟಲು ನೆರವಾಗಿದ್ದು ನಿತೀಶ್ ರೆಡ್ಡಿ ಮತ್ತು ಹೆನ್ರಿಚ್ ಕ್ಲಾಸನ್ ಬ್ಯಾಟಿಂಗ್. ನಿತೀಶ್ ರೆಡ್ಡಿ 42 ಎಸೆತಗಳಲ್ಲಿ 76, ಕ್ಲಾಸನ್ ಕೇವಲ 19 ಎಸೆತಗಳಿಂದ 42 ರನ್ ಸಿಡಿಸಿದರು.  ಆರ್ ಆರ್ ಪರ ಆವೇಶ್ ಖಾನ್ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಗೆ ಯಶಸ್ವಿ ಜೈಸ್ವಾಲ್ 67 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಬೆನ್ನು ಬೆನ್ನಿಗೇ ಶೂನ್ಯ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದು ತಂಡಕ್ಕೆ ಹೊಡೆತ ನೀಡಿತು.  ಆದರೆ ಬಳಿಕ ರಿಯಾನ್ ಪರಾಗ್ 77 ರನ್ ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ಹೈದರಾಬಾದ್ ಡೆತ್ ಓವರ್ ನಲ್ಲಿ ಅದ್ಭುತ ಬೌಲಿಂಗ್ ನಡೆಸಿದ್ದರಿಂದ ರಾಜಸ್ಥಾನ್ ಗೆ ಗೆಲ್ಲಲು ಸಾಧ‍್ಯವಾಗಿಲ್ಲ.

ಕೊನೆಯ 4 ಎಸೆತಗಳಲ್ಲಿ 10 ರನ್ ಬೇಕಾಗಿತ್ತು. ಮೂರನೇ ಎಸೆತವನ್ನು ಪೊವೆಲ್ ಬೌಂಡರಿಗಟ್ಟಿದರು. ಮುಂದಿನ ಎರಡು ಎಸೆತಗಳಲ್ಲಿ ತಲಾ 2 ರನ್ ಬಂತು. ಆದರೆ ಕೊನೆಯ ಎಸೆತದಲ್ಲಿ ಎರಡು ರನ್ ಬೇಕಾಗಿದ್ದಾಗ ಪೊವೆಲ್ ಎಲ್ ಬಿ ಡಬ್ಲ್ಯು ಆದರು. ಇದರೊಂದಿಗೆ ರಾಜಸ್ಥಾನ್ 1 ರನ್ ನಿಂದ ಸೋತಿತು. ಅಂತಿಮವಾಗಿ ರಾಜಸ್ಥಾನ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ