ಜೈಪುರ: ಐಪಿಎಲ್ 2024 ರಲ್ಲಿ ಇಂದು ಎರಡು ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ.
ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಕಳೆದ ಎರಡೂ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ನಾಯಕ ರಾಹುಲ್ ಗಾಯಗೊಂಡು ಕೊನೆಯ ಹಂತದಲ್ಲಿ ತಡವರಿಸಿತ್ತು. ಆದರೆ ಆರಂಭಿಕ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತು.
ಸ್ವತಃ ಕೆಎಲ್ ರಾಹುಲ್ ಈ ತಂಡದ ಶಕ್ತಿ. ಜೊತಗೆ ಕನ್ನಡಿಗ ದೇವದತ್ ಪಡಿಕ್ಕಲ್, ಕೆ ಗೌತಮ್, ಅಶ್ತೋನ್ ಟರ್ನರ್, ದೀಪಕ್ ಹೂಡಾ, ಆಯುಷ್ ಬದಾನಿಯಂತಹ ಪ್ರತಿಭಾವಂತರಿದ್ದಾರೆ. ಲಕ್ನೋ ತಂಡದಲ್ಲಿ ಆಲ್ ರೌಂಡರ್ ಗಳಿಗೇನೂ ಕೊರತೆಯಿಲ್ಲ. ಕೃನಾಲ್ ಪಾಂಡ್ಯ, ಕೈಲ್ ಮೇಯರ್ಸ್ ಮುಂತಾದ ಪ್ರತಿಭಾವಂತರಿದ್ದಾರೆ. ಇದು ಟಿ20 ಫಾರ್ಮ್ಯಾಟ್ ನಲ್ಲಿ ಒಂದು ತಂಡಕ್ಕೆ ಪ್ಲಸ್ ಪಾಯಿಂಟ್.
ಇತ್ತ ರಾಜಸ್ಥಾನ್ ರಾಯಲ್ಸ್ ಸಂಜು ಸ್ಯಾಮ್ಸನ್ ನೇತೃತ್ವದಲ್ಲಿ ಇದುವರೆಗೆ ಆರಕ್ಕೇರದ, ಮೂರಕ್ಕಿಳಿಯದ ಪ್ರದರ್ಶನ ನೀಡುತ್ತಾ ಬಂದಿದೆ. ಆರಂಭದಲ್ಲಿ ಅಬ್ಬರಿಸಿದರೂ ರಾಜಸ್ಥಾನ್ ಕೊನೆಯ ಹಂತದಲ್ಲಿ ಜಾರಿ ಬೀಳುವುದನ್ನು ಚಾಳಿ ಮಾಡಿಕೊಂಡಿದೆ. ಅದು ಈ ಸೀಸನ್ ನಲ್ಲಿ ನಿವಾರಣೆಯಾಗುತ್ತಾ ನೋಡಬೇಕಿದೆ.
ರಾಜಸ್ಥಾನ್ ತಂಡದಲ್ಲಿ ಶಿಮ್ರೋನ್ ಹೆಟ್ಮೈರ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ರಿಯಾನ್ ಪರಾಗ್ ರಂತಹ ಟಿ20 ಸ್ಪೆಷಲಿಸ್ಟ್ ಬ್ಯಾಟಿಗರಿದ್ದಾರೆ. ಅವರ ಜೊತೆಗೆ ಸ್ವತಃ ನಾಯಕ ಸಂಜು ಸ್ಯಾಮ್ಸನ್ ಹೊಡೆಬಡಿಯ ಆಟಕ್ಕೆ ಹೆಸರು ವಾಸಿ. ಬೌಲಿಂಗ್ ನಲ್ಲಿ ಹಿರಿಯ ರವಿಚಂದ್ರನ್ ಅಶ್ವಿನ್, ಆವೇಶ್ ಖಾನ್, ರೊವ್ಮನ್ ಪೊವೆಲ್, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್ ರಂತಹ ಘಟಾನುಘಟಿಗಳಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ರಾಜಸ್ಥಾನ್ ಬಲಿಷ್ಠವಾಗಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.