ಚಂಢೀಘಡ: ಐಪಿಎಲ್ 2024 ರ ಇಂದಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 4 ವಿಕೆಟ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಕ್ರಿಕೆಟ್ ಅಂಕಣಕ್ಕೆ ಮರಳಿದ ಮೊದಲ ಪಂದ್ಯದಲ್ಲೇ ರಿಷಬ್ ಪಂತ್ ಗೆ ಸೋಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಆರಂಭಿಕ ಡೇವಿಡ್ ವಾರ್ನರ್ 29, ಮಿಚೆಲ್ ಮಾರ್ಷ್ 20 ರನ್ ಗಳಿಸಿದರು. 33 ರನ್ ಗಳಿಸಿ ಶೈ ಹೋಪ್ ರದ್ದು ಗರಿಷ್ಠ ಸ್ಕೋರ್. ಹಲವು ದಿನಗಳ ನಂತರ ಮೈದಾನಕ್ಕಿಳಿದ ರಿಷಬ್ ಪಂತ್ 13 ಎಸೆತಗಳಿಂದ 18 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಡೆಲ್ಲಿ ಮೊತ್ತ ಉಬ್ಬಲು ನೆರವಾಗಿದ್ದು ಅಬಿಷೇಕ್ ಪೊರೆಲ್. ಅವರು ಕೇವಲ 10 ಎಸೆತಗಳಿಂದ ಅಜೇಯ 32 ರನ್ ಸಿಡಿಸಿದರು.
ಈ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭ ಅಷ್ಟೊಂದು ಉತ್ತಮವಾಗಿರಲಿಲ್ಲ. ನಾಯಕ ಶಿಖರ್ ಧವನ್ 22, ಜಾನಿ ಬೇರ್ ಸ್ಟೋ 9 ರನ್ ಗಳಿಸಿ ಔಟಾದರು. ನಂತರ ಬಂದ ಪ್ರಭಿಸ್ಮರನ್ 26 ರನ್ ಗಳ ಕೊಡುಗೆ ನೀಡಿದರು. ಆದರೆ ಬಳಿಕ ಪಂದ್ಯದ ಗತಿ ಬದಲಾಯಿಸಿದ್ದು ಸ್ಯಾಮ್ ಕ್ಯುರೆನ್. 47 ಎಸೆತ ಎದುರಿಸಿದ ಅವರು 63 ರನ್ ಸಿಡಿಸಿ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದರು. ಕೊನೆಯಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ 21 ಎಸೆತಗಳಿಂದ 38 ರನ್ ಸಿಡಿಸಿ ತಂಡಕ್ಕೆ ಗೆಲುವು ಕೊಡಿಸಿದರು. ಇದರೊಂದಿಗೆ ಪಂಜಾಬ್ ಗೆಲುವಿನ ಶುಭಾರಂಭ ಮಾಡಿತು.
ಇಂದಿನ ಇನ್ನೊಂದು ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಹೈದರಾಬಾದ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಕೆಕೆಆರ್ ಇತ್ತೀಚೆಗಿನ ವರದಿ ಬಂದಾಗ 11 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿದೆ. ರಮಣ್ ದೀಪ್ ಸಿಂಗ್ 27, ಫಿಲಿಪ್ ಸಾಲ್ಟ್ 43 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇದಕ್ಕೆ ಮೊದಲು ಸುನಿಲ್ ನರೈನ್ 2, ವೆಂಕಟೇಶ್ ಅಯ್ಯರ್ 7, ನಿತೀಶ್ ರಾಣಾ 9 ಮತ್ತು ನಾಯಕ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು.