ಐಪಿಎಲ್ 2024: ಅತೀ ವೇಗದ ಚೆಂಡೆಸದು ದಾಖಲೆ ಮಾಡಿದ ಮಯಾಂಕ್ ಯಾದವ್

Krishnaveni K

ಭಾನುವಾರ, 31 ಮಾರ್ಚ್ 2024 (09:17 IST)
Photo Courtesy: Twitter
ಲಕ್ನೋ: ಐಪಿಎಲ್ 2024 ರ ನಿನ್ನೆಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮಯಾಂಕ್ ಯಾದವ್ ವೇಗದ ಚೆಂಡೆಸೆದು ದಾಖಲೆ ಮಾಡಿದ್ದಾರೆ.

ಈ ಪಂದ್ಯವನ್ನು ಲಕ್ನೋ 21 ರನ್ ಗಳಿಂದ ಗೆದ್ದುಕೊಂಡಿತು. ಮಯಾಂಕ್ 4 ಓವರ್ ಗಳ ಕೋಟಾದಲ್ಲಿ 27 ರನ್ ನೀಡಿ 3 ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಗಮನ ಸೆಳೆದಿದ್ದು ಮಯಾಂಕ್ ವೇಗದ ಎಸೆತಗಳು. ಅದೂ ಚೊಚ್ಚಲ ಪಂದ್ಯದಲ್ಲೇ ಈ ದಾಖಲೆ ಮಾಡಿರುವುದು ವಿಶೇಷ.

ಆರಂಭದಲ್ಲಿ ಗಂಟೆಗೆ 149 ಕಿ.ಮೀ. ವೇಗದಲ್ಲಿ ಚೆಂಡೆಸೆದ ಮಯಾಂಕ್ ಬಳಿಕ 155.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದರು. ಈ ಮೂಲಕ ಐಪಿಎಲ್ ನಲ್ಲಿ ವೇಗದ ಚೆಂಡೆಸೆದ ದಾಖಲೆ ಮಾಡಿದರು. ಕಣ್ಣು ಮಿಟುಕುವಷ್ಟರಲ್ಲಿ ಈ ಚೆಂಡು ಕೀಪರ್ ಕೈ ಸೇರಿತ್ತು. ಯುವ ಬೌಲರ್ ನ ಪ್ರದರ್ಶನ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು.

ಪಂಜಾಬ್ ನ ಅನುಭವಿ ಬ್ಯಾಟರ್ ಗಳೇ ಮಯಾಂಕ್ ಬೆಂಕಿಯ ಚೆಂಡಿನ ಮುಂದೆ ಬ್ಯಾಟ್ ಮಾಡಲು ತಿಣುಕಾಡಿದರು. ಸಾಮಾನ್ಯವಾಗಿ ವೇಗದ ಬೌಲಿಂಗ್ ಮಾಡುವಾಗ ಬೌಲರ್ ಗಳು ನಿಯಂತ್ರಣ ಕಳೆದುಕೊಳ್ಳುವುದಿದೆ. ಆದರೆ ಮಯಾಂಕ್ ನಿಯಂತ್ರಣದಲ್ಲೂ ಹಿಡಿತ ಸಾಧಿಸುತ್ತಿದ್ದಾರೆ. ಹೀಗಾಗಿ ಈ ವಿಶೇಷ ಪ್ರತಿಭೆಗೆ ಬೌಲಿಂಗ್ ದಿಗ್ಗಜರಾದ ಬ್ರೆಟ್ ಲೀ, ಡೇಲ್ ಸ್ಟೈನ್ ನಂತಹವರೇ ಪ್ರಶಂಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ