ಜೈಪುರ: ಐಪಿಎಲ್ 2024 ರಲ್ಲಿ ಚೇತೋಹಾರಿ ಪ್ರದರ್ಶನ ನೀಡುತ್ತಿರುವ ತಂಡಗಳಲ್ಲಿ ರಾಜಸ್ಥಾನ್ ರಾಯಲ್ಸ್ ಕೂಡಾ ಒಂದು. ಸತತವಾಗಿ ಗೆಲ್ಲುತ್ತಲೇ ಬಂದಿರುವ ರಾಜಸ್ಥಾನ್ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯ ಜೈಪುರದಲ್ಲಿ ನಡೆಯಲಿದೆ. ಇದುವರೆಗೆ ಆಡಿದ 7 ಪಂದ್ಯಗಳ ಪೈಕಿ ಆರನ್ನು ಗೆದ್ದಿರುವ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಸಂಜು ಸ್ಯಾಮ್ಸನ್ ಪಡೆ ಈ ಬಾರಿ ಎಲ್ಲಾ ವಿಭಾಗದಲ್ಲೂ ಮಿಂಚುತ್ತಿದೆ. ಕೆಲವೊಂದು ನಂಬಲಸಾಧ‍್ಯ ಗೆಲುವು ತನ್ನದಾಗಿಸಿಕೊಂಡಿದೆ.
ಕಳೆದ ಪಂದ್ಯವನ್ನು ರಾಜಸ್ಥಾನ್ ಸೋಲಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಜೋಸ್ ಬಟ್ಲರ್ ಅದ್ಭುತ ಶತಕದಿಂದಾಗಿ ತಂಡ ನಂಬಲಸಾಧ‍್ಯ ಗೆಲುವು ತನ್ನದಾಗಿಸಿಕೊಂಡಿತ್ತು. ಸಂಜು ಪಡೆಗೆ ಈ ಬಾರಿ ಬೌಲಿಂಗ್ ಕೂಡಾ ಕ್ಲಿಕ್ ಆಗುತ್ತಿದೆ. ಡೆತ್ ಓವರ್ ಗಳಲ್ಲಿ ಎದುರಾಳಿಯನ್ನು ನಿಯಂತ್ರಿಸುವ ಸಂದೀಪ್ ಶರ್ಮ, ಆವೇಶ್ ಖಾನ್, ಕುಲದೀಪ್ ಸೇನ್, ಟ್ರೆಂಟ್ ಬೌಲ್ಟ್ ನಂತಹ ಉತ್ತಮ ಬೌಲರ್ ಗಳು ತಂಡದಲ್ಲಿದ್ದಾರೆ. ಜೊತೆಗೆ ಬ್ಯಾಟಿಂಗ್ ನಲ್ಲಿ ಈಗಾಗಲೇ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಅದ್ಭುತ ಇನಿಂಗ್ಸ್ ಗಳನ್ನು ಆಡಿದ್ದರು. ಇದೀಗ ಜೋಸ್ ಬಟ್ಲರ್ ಕೂಡಾ ಫಾರ್ಮ್ ಗೆ ಬಂದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಈಗಷ್ಟೇ ಗೆಲುವಿನ ಹಳಿಗೆ ಬರುತ್ತಿದೆ. ಆರಂಭಿಕ ನಾಲ್ಕು ಪಂದ್ಯಗಳನ್ನು ಸೋತಿದ್ದ ಮುಂಬೈ ಈಗ ಗೆಲುವಿನ ಹಾದಿಗೆ ಮರಳಿದೆ. ಆಡಿದ 7 ಪಂದ್ಯಗಳ ಪೈಕಿ ಮೂರು ಗೆಲುವು ಕಂಡಿದೆ. ಅದೂ ಈ ಮೂರು ಗೆಲುವು ಬಂದಿದ್ದು ತೀರಾ ಇತ್ತೀಚೆಗಿನ ಪಂದ್ಯದಲ್ಲಿ. ರೋಹಿತ್ ಶರ್ಮಾ ಉತ್ತಮ ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ, ಆಕಾಶ್ ಮಧ‍್ವಾಲ್ ಮಿಂಚುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿ ತಮ್ಮ ಫಾರ್ಮ್ ಪ್ರದರ್ಶಿಸಿದ್ದರು. ರಾಜಸ್ಥಾನ್ ತಂಡವನ್ನು ಸೋಲಿಸಬೇಕಾದರೆ ಮುಂಬೈ ಆಟಗಾರರು ತಮ್ಮ ಖ್ಯಾತಿಗೆ ತಕ್ಕ ಆಟವಾಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.