ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಮತ್ತೊಮ್ಮೆ ಸೋಲು ಅನುಭವಿಸಿದೆ. ಇದರೊಂದಿಗೆ ಗೆಲುವಿಗಾಗಿ ಕಾದಿದ್ದ ಫ್ಯಾನ್ಸ್ ಗೆ ತೀವ್ರ ನಿರಾಸೆಯಾಗಿದೆ. ರೋಚಕ ಹಣಾಹಣಿಯಲ್ಲಿ ಕೆಕೆಆರ್ 1 ರನ್ ನಿಂದ ಪಂದ್ಯ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು. ಕೆಕೆಆರ್ ಪರ ಸಾಲ್ಟ್ 14 ಎಸೆತಗಳಿಂದ 48 ಮತ್ತು ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳಿಂದ 50 ರನ್ ಗಳಿಸಿದರು. ಕೊನೆಯಲ್ಲಿ ಬಂದ ರಮಣ್ ದೀಪ್ ಸಿಂಗ್ 9 ಎಸೆತಗಳಿಂದ 24 ರನ್ ಚಚ್ಚುವ ಮೂಲಕ ತಂಡದ ಮೊತ್ತ 200 ರ ಗಡಿ ದಾಟುವಂತೆ ಮಾಡಿದರು. ಆರ್ ಸಿಬಿ ಪರ ಯಶ್ ದಯಾಳ್ 2, ಕ್ಯಾಮರೂನ್ ಗ್ರೀನ್ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ಆರ್ ಸಿಬಿಗೆ ಎಂದಿನಂತೆ ಅಗ್ರ ಕ್ರಮಾಂಕ ಕೈ ಕೊಟ್ಟಿತು. ವಿರಾಟ್ ಕೊಹ್ಲಿ 18 ರನ್ ಗಳಿಸಿ ಮೊದಲನೆಯವರಾಗಿ ಔಟಾದರು. ಬಳಿಕ 7 ರನ್ ಗಳಿಸಿ ಫಾ ಡು ಪ್ಲೆಸಿಸ್ ಅವರ ಹಿಂದೆಯೇ ಪೆವಿಲಿಯನ್ ಗೆ ನಡೆದರು. ನಂತರ ವಿಲ್ ಜ್ಯಾಕ್ಸ್ 55 ಮತ್ತು ರಜತ್ ಪಟಿದಾರ್ 52 ರನ್ ಗಳಿಸಿ ತಂಡದ ಸ್ಥಿತಿ ಸುಧಾರಿಸಿದರು. ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಪ್ರಭುದೇಸಾಯಿ ಮೇಲೆ ಭರವಸೆಯಿತ್ತು. ಆದರೆ ಅವರು 18 ಎಸೆತ ಎದುರಿಸಿ 24 ರನ್ ಗಳಿಸಿ ಕೈಕೊಟ್ಟರು. ಎಂದಿನಂತೆ ದಿನೇಶ್ ಕಾರ್ತಿಕ್ ಫಿನಿಶ್ ಮಾಡಬಹುದು ಎಂಬ ಲೆಕ್ಕಾಚಾರವೂ ತಪ್ಪಿ ಹೋಯ್ತು. ಕಾರ್ತಿಕ್ 18 ಎಸೆತಗಳಿಂದ 25 ರನ್ ಗಳಿಸಿ ನಿರ್ಣಾಯಕ ಹಂತದಲ್ಲಿ ಔಟಾದರು.
ಈ ಹಂತದಲ್ಲಿ ಬೀಡು ಬೀಸಾದ ಬ್ಯಾಟಿಂಗ್ ಮಾಡಿದ ಕರ್ಣ್ ಶರ್ಮ ಆರ್ ಸಿಬಿ ಫ್ಯಾನ್ಸ್ ಗೆ ಗೆಲುವಿನ ಭರವಸೆ ಮೂಡಿಸಿದರು. ಆದರೆ ಗೆಲುವಿಗೆ 3 ರನ್ ಬೇಕಾಗಿದ್ದಾಗ ಕರ್ಣ್ ಔಟಾದರು. ಅವರ ಹಿಂದೆಯೇ ಫರ್ಗ್ಯುಸನ್ ಕೂಡಾ ಔಟಾಗಿ ಕೇವಲ 1 ರನ್ ನಿಂದ ಪಂದ್ಯ ಸೋತರು. ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 221 ರನ್ ಗಳಿಗೆ ಆಲೌಟ್ ಆಯಿತು.