ಸಿಡ್ನಿ: ಗಾಯಗೊಂಡು ಸಿಡ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸದ್ಯದಲ್ಲೇ ನಿಮಗೆ ಸರ್ಪೈಸ್ ನೀಡಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸಾಯ್ಕಾ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಕ್ಯಾಚ್ ಹಿಡಿಯುವ ಯತ್ನದಲ್ಲಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಆಂತರಿಕ ರಕ್ತಸ್ರಾವವಾಗಿದ್ದರಿಂದ ಅವರಿಗೆ ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರನ್ನು ಐಸಿಯುವಿನಿಂದ ಹೊರ ಕರೆತರಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ.
ಇದರ ನಡುವೆ ಬಿಸಿಸಿಐ ಕಾರ್ಯದರ್ಶಿ ಸಾಯ್ಕಾ ಶ್ರೇಯಸ್ ಚೇತರಿಕೆ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಸಾಮಾನ್ಯವಾಗಿ ಇಂತಹ ಗಾಯಗಳಾದರೆ ಚೇತರಿಸಲು ಆರರಿಂದ ಎಂಟು ವಾರಗಳೇ ಬೇಕು. ಆದರೆ ಶ್ರೇಯಸ್ ನಾವು ಅಂದುಕೊಂಡಿರುವುದಕ್ಕಿಂತಲೂ ಶೀಘ್ರವಾಗಿ ಗುಣ ಮುಖರಾಗುತ್ತಿದ್ದಾರೆ.
ಹೀಗಾಗಿ ಅವರು ಸದ್ಯದಲ್ಲೇ ನಿಮಗೆ ಸರ್ಪೈಸ್ ನೀಡಬಹುದು. ಅವರು ಶೀಘ್ರದಲ್ಲೇ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಬಹುದು. ಅವರ ಚೇತರಿಕೆ ಬಗ್ಗೆ ವೈದ್ಯರು ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಶ್ರೇಯಸ್ ಈಗ ತಮ್ಮ ದೈನಂದಿನ ಚಟುವಟಿಕೆ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಲ್ಲ. ಹೀಗಾಗಿ ಬೇಗನೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಗುಡ್ ನ್ಯೂಸ್ ನೀಡಿದ್ದಾರೆ.