ಬೆಂಗಳೂರು: ಐಪಿಎಲ್ 2024 ರಲ್ಲಿ ಸತತ ಸೋಲಿನಿಂದ ಬಸವಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
ಕಳೆದ 6 ಪಂದ್ಯಗಳಲ್ಲಿ ಆರ್ ಸಿಬಿ ಗೆದ್ದಿದ್ದು ಕೇವಲ 1 ಪಂದ್ಯದಲ್ಲಿ ಮಾತ್ರ. ಅದೂ ಪಂಜಾಬ್ ಕಿಂಗ್ಸ್ ಎದುರು. ಉಳಿದೆಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಆರ್ ಸಿಬಿಗೆ ಈಗ ಆತ್ಮವಿಶ್ವಾಸದ ಕೊರತೆ ಎದುರಾಗಿದೆ.
ಬ್ಯಾಟಿಂಗ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ದಯನೀಯ ವೈಫಲ್ಯ ತಂಡಕ್ಕೆ ದೊಡ್ಡ ಕೊರತೆಯಾಗಿ ಕಾಡುತ್ತಿದೆ. ಕೆಳ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಫಾಡು ಪ್ಲೆಸಿಸ್ ಮಾತ್ರವೇ ಕೊಂಚ ರನ್ ಗಳಿಸಿ ಗಮನ ಸೆಳೆದಿದ್ದಾರೆ. ಇನ್ನು, ಬೌಲಿಂಗ್ ನಲ್ಲಿ ಪರಿಣಾಮಕಾರಿ ಸ್ಪಿನ್ನರ್ ನ ಕೊರತೆ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಆರ್ ಸಿಬಿಯಲ್ಲಿ ಎಲ್ಲವೂ ಸರಿಯಿಲ್ಲ.
ಆದರೆ ಇತ್ತ ಹೈದರಾಬಾದ್ ಇದುವರೆಗೆ ಎಲ್ಲಾ ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮ, ಆಡನ್ ಮಾರ್ಕರಮ್ ಸೇರಿದಂತೆ ಎಲ್ಲರೂ ಫಾರ್ಮ್ ನಲ್ಲಿದ್ದಾರೆ. ಭುವನೇಶ್ವರ್ ಕುಮಾರ್, ಟಿ ನಟರಾಜನ್, ಜಯದೇವ್ ಉನಾದ್ಕಟ್ ರಂತಹ ದೇಶೀಯ ಪ್ರತಿಭೆಗಳನ್ನು ಹೊಂದಿರುವ ಹೈದರಾಬಾದ್ ಬೌಲಿಂಗ್ ಕೂಡಾ ಅತ್ಯುತ್ತಮವಾಗಿದೆ. ಆರ್ ಸಿಬಿ ಇಂದು ತವರಿನ ನೆಲದಲ್ಲಾದರೂ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಬಯಕೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.