ಲಕ್ನೋ: ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾಗೆ ಬರ್ತ್ ಡೇ ದಿನವೇ ಸೋಲಿನ ಕಹಿ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಹುಟ್ಟುಹಬ್ಬದ ದಿನ ರೋಹಿತ್ ಶರ್ಮಾರಿಂದ ಭರ್ಜರಿ ಇನಿಂಗ್ಸ್ ನಿರೀಕ್ಷೆಯಿತ್ತು. ಆದರೆ ಅವರು ಕೇವಲ 4 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಇಶಾನ್ ಕಿಶನ್ 32 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಮಧ‍್ಯಮ ಕ್ರಮಾಂಕ ಸಂಪೂರ್ಣವಾಗಿ ಕೈ ಕೊಟ್ಟ ಮೇಲೆ ಕೆಳ ಕ್ರಮಾಂಕದಲ್ಲಿ ನೇಹಲ್ ವಧೇರಾ 46 ಮತ್ತು ಟಿಮ್ ಡೇವಿಡ್ ಬಿರುಸಿನ 35 ರನ್ ಗಳಿಸಿ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಲು ನೆರವಾದರು.
ಈ ಮೊತ್ತ ಬೆನ್ನತ್ತಿದ ಲಕ್ನೋಗೆ ಅರ್ಶಿನ್ ಕುಲಕರ್ಣಿ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಆರಂಭದಲ್ಲೇ ಆಘಾತ ನೀಡಿದರು. ಆದರೆ ನಾಯಕ ಕೆಎಲ್ ರಾಹುಲ್ 28 ರನ್ ಗಳಿಸಿದರು. ಇನ್ನೊಂದೆಡೆ ತಂಡದ ಗೆಲುವಿನ ರೂವಾರಿಯಾಗಿದ್ದು ಮಾರ್ಕಸ್ ಸ್ಟಾಯ್ನಿಸ್. 45 ಎಸೆತ ಎದುರಿಸಿದ ಅವರು 62 ರನ್ ಗಳಿಸಿದರು. ಇದರೊಂದಿಗೆ ಲಕ್ನೋ 19.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಕಂಡಿತು.
ಇದರೊಂದಿಗೆ ಒಟ್ಟು 12 ಅಂಕ ಸಂಪಾದಿಸಿದ ಲಕ್ನೋ ಮೂರನೇ ಸ್ಥಾನವನ್ನು ಭದ್ರಪಡಿಸಿತು. ಇತ್ತ ಮುಂಬೈ 10 ಪಂದ್ಯಗಳಿಂದ 7 ನೇ ಸೋಲು ಕಂಡು ಅಂಕಪಟ್ಟಿಯಲ್ಲಿ 9 ನೇ ಸ್ಥಾನಕ್ಕೆ ಜಾರಿತು.