IPL 2025 RCB vs LSG: ಆರ್ ಸಿಬಿ ವರ್ಸಸ್ ಎಲ್ಎಸ್ ಜಿ ಪಂದ್ಯ ಇಂದು ನಡೆಯುತ್ತಾ

Krishnaveni K

ಶುಕ್ರವಾರ, 9 ಮೇ 2025 (08:31 IST)
Photo Credit: X
ಲಕ್ನೋ: ಐಪಿಎಲ್ 2025 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯವಾಡಲಿದ್ದು, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಇರುವಾಗ ಪಂದ್ಯ ನಡೆಯುತ್ತಾ ಎನ್ನುವ ಅನುಮಾನವಿದೆ. ಇದಕ್ಕೆ ಇಲ್ಲಿದೆ ಉತ್ತರ.

 
ನಿನ್ನೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಅರ್ಧದಲ್ಲೇ ಸ್ಥಗಿತಗೊಳಿಸಿ ಪ್ರೇಕ್ಷಕರನ್ನು ಮೈದಾನದಿಂದ ತೆರವುಗೊಳಿಸಲಾಗಿತ್ತು. ಹೀಗಾಗಿ ಇಂದು ಐಪಿಎಲ್ ಪಂದ್ಯ ನಡೆಯುವುದೇ ಎಂಬ ಅನುಮಾನ ಪ್ರೇಕ್ಷಕರಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಸರ್ಕಾರದಿಂದ ಯಾವುದೇ ಸೂಚನೆ ಬಂದರೂ ನಾವು ಪಾಲಿಸುತ್ತೇವೆ. ಸದ್ಯಕ್ಕೆ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಈ ಬಾರಿ ಆರ್ ಸಿಬಿ ಚೇತೋಹಾರಿ ಪ್ರದರ್ಶನ ನೀಡುತ್ತಿದ್ದು ಕಪ್ ಗೆಲ್ಲುವ ಭರವಸೆ ಮೂಡಿಸಿದೆ. ಇದುವರೆಗೆ ಆಡಿ 11 ಪಂದ್ಯಗಳ ಪೈಕಿ 8 ರಲ್ಲಿ ಗೆದ್ದು ಟಾಪ್ 3 ರೊಳಗೆ ಸ್ಥಾನ ಪಡೆದಿದೆ. ಪ್ಲೇ ಆಫ್ ಹಂತಕ್ಕೇರುವ ಎಲ್ಲಾ ಅವಕಾಶಗಳೂ ಆರ್ ಸಿಬಿ ಬಳಿಯಿದೆ.

ಇದೀಗ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಲಕ್ನೋ ವಿರುದ್ಧ ಆರ್ ಸಿಬಿ ಪಂದ್ಯವಾಡಲಿದೆ. ಈ ಬಾರಿ ರಿಷಭ್ ಪಂತ್ ನೇತೃತ್ವದಲ್ಲಿ ಲಕ್ನೋ ಭಾರೀ ನಿರೀಕ್ಷೆಯಿಟ್ಟುಕೊಂಡಿತ್ತಾದರೂ ಅದೆಲ್ಲವೂ ಸುಳ್ಳಾಗಿದೆ.

ಆದರೆ ಆರ್ ಸಿಬಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿದೆ. ಹಾಗಿದ್ದರೂ ತಂಡಕ್ಕೆ ಗಾಯದ ಚಿಂತೆ ಕಾಡುತ್ತಿದೆ. ದೇವದತ್ತ್ ಪಡಿಕ್ಕಲ್ ಈಗಾಗಲೇ ಕೂಟದಿಂದ ಹೊರಬಿದ್ದಿದ್ದು, ನಾಯಕ ರಜತ್ ಪಾಟೀದಾರ್ ಕೂಡಾ ಗಾಯದ ಆತಂಕದಲ್ಲಿದ್ದಾರೆ. ಹೀಗಾಗಿ ಪ್ಲೇ ಆಫ್ ಗೆ ಮುನ್ನ ಉತ್ತಮ ಪ್ರದರ್ಶನದ ಜೊತೆಗೆ ತಂಡದ ಆಟಗಾರರು ಫಿಟ್ ಆಗಿರುವಂತೆ ನೋಡಿಕೊಳ್ಳುವ ತಲೆನೋವು ಆರ್ ಸಿಬಿ ಮ್ಯಾನೇಜ್ ಮೆಂಟ್ ಮುಂದಿದೆ. ಈ ಬಾರಿ ತವರಿನ ಹೊರತಾದ ಅಂಕಣದಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ಇಂದೂ ಆರ್ ಸಿಬಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ