ಸನ್‌ರೈಸರ್ಸ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಗೆಲುವು: ಪಟ್ಟಿಯಲ್ಲಿ ಮೂರನೇ ಸ್ಥಾನ

ಶುಕ್ರವಾರ, 13 ಮೇ 2016 (11:29 IST)
ಡೆಲ್ಲಿ ಡೇರ್ ಡೆವಿಲ್ಸ್ ಆಲ್ ರೌಂಡ್ ಪ್ರದರ್ಶನದ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಏಳುವಿಕೆಟ್‌ಗಳಿಂದ ಸೋಲಿಸಿ 2016ರ ಐಪಿಎಲ್‌ನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಬೌಲಿಂಗ್ ಆಯ್ಕೆ ಮಾಡಿಕೊಂಡ ಡೇರ್ ಡೆವಿಲ್ಸ್ ತಂಡವು ತನ್ನ ಮನೋಜ್ಞ ಬೌಲಿಂಗ್ ಪ್ರದರ್ಶನದ ಮೂಲಕ ಸನ್ ರೈಸರ್ಸ್ ತಂಡವನ್ನು ಸಾಧಾರಣ ಮೊತ್ತ 146ಕ್ಕೆ ಔಟ್ ಮಾಡಿ 18.1 ಓವರುಗಳಲ್ಲಿ ಗುರಿಯನ್ನು ದಾಟಿತು.

ಯುವ ಆಟಗಾರರಾದ ಸಂಜು ಸ್ಯಾಮ್ಸನ್ 34 ಮತ್ತು ರಿಷಬ್ ಪಂತ್ 39 ನೆರವಿನಿಂದ ಈ ಗುರಿಯನ್ನು ಮುಟ್ಟಿತು. ಈ ಜಯದಿಂದ 10 ಪಂದ್ಯಗಳಲ್ಲಿ 12 ಪಾಯಿಂಟ್ ಗಳಿಸಿರುವ ಡೇರ್ ಡೆವಿಲ್ಸ್ ಮೂರನೇ ಸ್ಥಾನಕ್ಕೆ ಜಿಗಿದಿದೆ.
 
 ಈ ಸೋಲಿನ ನಡುವೆಯೂ ಸನ್‌ರೈಸರ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 11 ಪಂದ್ಯಗಳಿಂದ 14 ಪಾಯಿಂಟ್ ಗಳಿಸಿದೆ. 
 
 147 ರನ್ ಬೆನ್ನಟ್ಟಿದ ಡೇರ್ ಡೆವಿಲ್ಸ್ ಉತ್ತಮವಾಗಿ ಆರಂಭಿಸಿ ಮೊದಲ ಮೂರು ಓವರುಗಳಲ್ಲಿ 20 ರನ್ ಸಿಡಿಸಿತು. ಮಾಯಾಂಕ್ ಅಗರವಾಲ್ ಆಶಿಶ್ ನೆಹ್ರಾ ಬೌಲಿಂಗ್‌ನಲ್ಲಿ ಯುವರಾಜ್‌ಗೆ ಕ್ಯಾಚಿತ್ತು ಔಟಾದರು. ಕ್ವಿಂಟನ್ ಡಿ ಕಾಕ್(31 ಎಸೆತಕ್ಕೆ 44) ನೆಹ್ರಾ ಬೌಲಿಂಗ್‌ನಲ್ಲಿ ಸ್ಕ್ವೇರ್ ಲೆಗ್‌ನಲ್ಲಿ ಭಾರಿ ಸಿಕ್ಸರ್ ಎತ್ತಿದರು ಮತ್ತು ಅದರ ಹಿಂದೆಯೇ ಬೌಂಡರಿ ಬಾರಿಸಿದರು.
 
 ಹೆನ್ರಿಕ್ಸ್ 10ನೇ ಓವರಿನಲ್ಲಿ ಡೆಲ್ಲಿ ಚೇಸ್‌ಗೆ ಬ್ರೇಕ್ ಹಾಕಿ 2 ವಿಕೆಟ್ ಕಬಳಿಸಿದರು. ಹೆನ್ರಿಕ್ಸ್ ಮೊದಲಿಗೆ ಯಾರ್ಕರ್ ಮೂಲಕ ನಾಯರ್ ಅವರನ್ನು ಔಟ್ ಮಾಡಿದರು. ಎರಡು ಎಸೆತಗಳ ನಂತರ ಡಿ ಕಾಕ್ ವಿಕೆಟ್ ಹಿಂದೆ ನಮನ್ ಓಜಾಗೆ ಕ್ಯಾಚಿತ್ತು ಔಟಾದರು.
 
ಇದಾದ ಬಳಿಕ ಸ್ಯಾಮ್ಸನ್ ಮತ್ತು ಪಂತ್ ಇಬ್ಬರು ಎಚ್ಚರಿಕೆಯಿಂದ ಆಡಿ ನಾಲ್ಕನೇ ವಿಕೆಟ್‌ಗೆ 72 ರನ್ ಜತೆಯಾಟವಾಡಿದರು.

ವೆಬ್ದುನಿಯಾವನ್ನು ಓದಿ