ಜಿಂಬಾಬ್ವೆ ಪ್ರವಾಸಕ್ಕೂ ಕೆಎಲ್ ರಾಹುಲ್ ಇಲ್ಲ: ಇದೆಲ್ಲಾ ಆ ಒಂದು ಮಾತಿನ ಇಫೆಕ್ಟ್

Krishnaveni K

ಮಂಗಳವಾರ, 25 ಜೂನ್ 2024 (11:33 IST)
ಮುಂಬೈ: ಜಿಂಬಾಬ್ವೆ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ ಮಾಡಲಾಗಿದೆ. ಆದರೆ ಈ ತಂಡದಲ್ಲೂ ಕನ್ನಡಿಗ ಕೆಎಲ್ ರಾಹುಲ್ ಗೆ ಅವಕಾಶ ಸಿಕ್ಕಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಟೀಂ ಇಂಡಿಯಾ ಕಂಡ ಪ್ರತಿಭಾವಂತ ಬ್ಯಾಟಿಗ ಕಮ್ ವಿಕೆಟ್ ಕೀಪರ್ ಆಗಿರುವ ಕೆಎಲ್ ರಾಹುಲ್ ರನ್ನು ಬೇಕೆಂದೇ ಕಡೆಗಣಿಸಲಾಗುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ. ಇದಕ್ಕೆಲ್ಲಾ ಆ ಒಂದು ಹೇಳಿಕೆಯೇ ಕಾರಣವಾಗಿಬರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಜುಲೈ 6 ರಿಂದ ಜಿಂಬಾಬ್ವೆಯಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಶುಬ್ಮನ್ ಗಿಲ್ ನೇತೃತ್ವದ 15 ಸದಸ್ಯರ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಬಹುತೇಕ ಟಿ20 ವಿಶ್ವಕಪ್ ಸರಣಿಯಲ್ಲಿ ಅವಕಾಶ ಸಿಗದ ಹೊಸ ಪ್ರತಿಭೆಗಳಿಗೆ ಈ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ಕೆಎಲ್ ರಾಹುಲ್ ರನ್ನು ಹೊರಗಿಡಲಾಗಿದೆ.

ಇದಕ್ಕೆಲ್ಲಾ ಐಪಿಎಲ್ ಸಂದರ್ಭದಲ್ಲಿ ಲಕ್ನೋ ಕೋಚ್ ಜಸ್ಟಿನ್ ಲ್ಯಾಂಗರ್ ನೀಡಿದ್ದ ಹೇಳಿಕೆಯೇ ಕಾರಣವಿರಬಹುದಾ ಎಂದು ವಿಶ್ಲೇಷಿಸಲಾಗಿದೆ. ಲ್ಯಾಂಗರ್ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ರಾಹುಲ್ ಅಭಿಪ್ರಾಯ ಕೇಳಿದ್ದೆ. ಟೀಂ ಇಂಡಿಯಾ ಕೋಚ್ ಆದರೆ ರಾಜಕೀಯ ಒತ್ತಡಗಳಿರುತ್ತವೆ. ಐಪಿಎಲ್ ಗಿಂತಲೂ 10 ಪಟ್ಟು ಹೆಚ್ಚು ಒತ್ತಡ ಎದುರಿಸಬೇಕಾಗುತ್ತದೆ ಎಂದಿದ್ದರು ಎಂದು ಬಹಿರಂಗವಾಗಿ ಹೇಳಿದ್ದರು. ಇದರಿಂದಾಗಿ ರಾಹುಲ್ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಇದೇ ಕಾರಣಕ್ಕೆ ಜಿಂಬಾಬ್ವೆ ಸರಣಿಗೂ ರಾಹುಲ್ ರನ್ನು ಕಡೆಗಣಿಸಿರಬಹುದೇ ಎಂಬ ಅನುಮಾನ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ