T20 WC 2024: ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೇಡು ಪೂರ್ತಿ

Krishnaveni K

ಮಂಗಳವಾರ, 25 ಜೂನ್ 2024 (08:26 IST)
ಸೈಂಟ್ ಲೂಸಿಯಾ: ಕಳೆದ ವರ್ಷ ನವಂಬರ್ ನಲ್ಲಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಟೀಂ ಇಂಡಿಯಾ ಆಘಾತಕಾರಿಯಾಗಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದನ್ನು ಕ್ರಿಕೆಟ್ ಪ್ರೇಮಿಗಳು ಯಾರೂ ಮರೆಯುವಂತಿಲ್ಲ. ಇಂದು ಆ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತು.

ಟಿ20 ವಿಶ್ವಕಪ್ ನ ಕೊನೆಯ ಸೂಪರ್ 8 ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಬಲ ಆಸ್ಟ್ರೇಲಿಯಾವನ್ನು 24 ರನ್ ಗಳಿಂದ ಬಗ್ಗು ಬಡಿಯುವ ಮೂಲಕ ತಾನು ಸೆಮಿಫೈನಲ್ ಗೇರಿ, ಆಸೀಸ್ ನ ಸೆಮಿಫೈನಲ್ ಹಾದಿಯನ್ನು ದುರ್ಗಮವಾಗಿಸಿತು. ಇದೀಗ ಆಸ್ಟ್ರೇಲಿಯಾ ಸೆಮಿಫೈನಲ್ ಗೇರಬೇಕಾದರೆ ಇಂದು ನಡೆಯಲಿರುವ ಬಾಂಗ್ಲಾದೇಶ-ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಸೋಲಬೇಕು. ಒಂದು ವೇಳೆ ಅಫ್ಘಾನಿಸ್ತಾನ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ ಅಬ್ಬರದ ಆರಂಭ ನೀಡಿದರು. ಏಕದಿನ ವಿಶ್ವಕಪ್ ಫೈನಲ್ ಸೋಲಿನ ಎಲ್ಲಾ ಹತಾಶೆಯನ್ನು ಇಲ್ಲಿ ತೀರಿಸಿಕೊಳ್ಳುವವರಂತೆ ಬ್ಯಾಟಿಂಗ್ ಮಾಡಿದ ರೋಹಿತ್ ಕೇವಲ 41 ಎಸೆತಗಳಿಂದ 8 ಸಿಕ್ಸರ್, 7ಬೌಂಡರಿ ಸಹಿತ 92 ರನ್ ಗಳಿಸಿದ್ದಾಗ ಔಟಾದರು. ಅದರಲ್ಲೂ ಆಸೀಸ್ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ರನ್ನು ಮನಬಂದಂತೆ ಬಡಿದ ರೋಹಿತ್ ಒಂದೇ ಓವರ್ ನಲ್ಲಿ 29 ರನ್ ಚಚ್ಚಿದ್ದರು.

ಆದರೆ ಇನ್ನೊಂದೆಡೆ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಮತ್ತೊಮ್ಮೆ ವೈಫಲ್ಯಕ್ಕೀಡಾದರು. ರಿಷಬ್ ಪಂತ್ 15 ರನ್ ಗಳ ಕೊಡುಗೆ ನೀಡಿದರು. ರಿಷಬ್ ಇಂದು ರೋಹಿತ್ ಬ್ಯಾಟಿಂಗ್ ಗೆ ಮೂಕ ಸಾಕ್ಷಿಯಾಗಬೇಕಾಯಿತು. ಆದರೆ ನಂತರ ಬಂದ ಸೂರ್ಯಕುಮಾರ್ ಯಾದವ್ ಕೇವಲ 16 ಎಸೆತಗಳಲ್ಲಿ 31 ರನ್ ಚಚ್ಚಿ ತಮ್ಮ ಪಾತ್ರ ನಿಭಾಯಿಸಿದರು. ಹಾರ್ದಿಕ್ ಪಾಂಡ್ಯ ಎಂದಿನಂತೆ ಉಪಯುಕ್ತ ಇನಿಂಗ್ಸ್ ಆಡಿದ್ದು17 ಎಸೆತಗಳಿಂದ ಅಜೇಯ 27 ರನ್ ಗಳಿಸಿದರು. ಶಿವಂ ದುಬೆ ಕೂಡಾ 22 ಎಸೆತಗಳಿಂದ 28 ರನ್ ಗಳ ಕೊಡುಗೆ ನೀಡಿದರು. ರವೀಂದ್ರ ಜಡೇಜಾ ಕೊನೆಯಲ್ಲಿ ಬಂದು ಒಂದು ಸಿಕ್ಸರ್ ಸಹಿತ 9 ರನ್ ಗಳಿಸಿದ್ದರಿಂದ ಭಾರತ 200 ರ ಗಡಿ ದಾಟಿತು. ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು.

ಈ ಮೊತ್ತ ಬೆನ್ನತ್ತಿದ ಆಸೀಸ್ ಗೆ ಡೇವಿಡ್ ವಾರ್ನರ್ (6) ವಿಕೆಟ್ ಕಬಳಿಸುವ ಮೂಲಕ ಅರ್ಷ್ ದೀಪ್ ಸಿಂಗ್ ಆರಂಭದಲ್ಲೇ ಆಘಾತವಿಕ್ಕಿದರು. ಆದರೆ ಬಳಿಕ ಟ್ರಾವಿಸ್ ಹೆಡ್-ಮಿಚೆಲ್ ಮಾರ್ಷ್ ಜೋಡಿ ಅಪಾಯಕಾರಿಯಾಗುವ ಸೂಚನೆಯಿತ್ತಿತ್ತು. ಈ ಎರಡೂ ಭಾರತದ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದರು. ಟ್ರಾವಿಸ್ 43 ಎಸೆತಗಳಲ್ಲಿ 76 ರನ್ ಗಳಿಸಿದರೆ ಮಿಚೆಲ್ ಮಾರ್ಷ್ 37 ರನ್ ಗಳಿಸಿದರು. ಮಾರ್ಷ್ ಮತ್ತು 20 ರನ್ ಗಳಿಸಿ ಅಪಾಯಕಾರಿಯಾಗುವ ಸೂಚನೆಯಿತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ನ್ನು ಕುಲದೀಪ್ ಯಾದವ್ ಕಬಳಿಸುವುದರ ಮೂಲಕ ಭಾರತದ ಗೆಲುವಿಗೆ ಮುನ್ನುಡಿ ಬರೆದರು.  ಕುಲದೀಪ್ ಪಡೆದ ಈ ಎರಡು ವಿಕೆಟ್ ಪಂದ್ಯಕ್ಕೆ ತಿರುವು ನೀಡಿತು.

ಆರಂಭಿಕ ಸ್ಪೆಲ್ ನಲ್ಲಿ ದುಬಾರಿಯಾಗಿದ್ದರೂ ಅಂತಿಮ ಓವರ್ ನ್ನು ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ನಿಭಾಯಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ