ಹೈದರಾಬಾದ್: ಟೀಂ ಇಂಡಿಯಾ ನಾಯಕತ್ವ ವಹಿಸುವುದು ಎಲ್ಲಾ ಆಟಗಾರರ ಕನಸು. ಭಾರತ ತಂಡದಲ್ಲಿ ಇದೀಗ ನಾಯಕತ್ವದಲ್ಲೂ ಪ್ರಯೋಗ ನಡೆಯುತ್ತಿದ್ದು, ಹಲವರು ನಾಯಕತ್ವದ ಆಕಾಂಕ್ಷಿಗಳಾಗಿದ್ದಾರೆ.
ರೋಹಿತ್ ಶರ್ಮಾ ಬಳಿಕ ತಂಡದ ನಾಯಕತ್ವ ವಹಿಸಲು ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ನಡುವೆ ಪೈಪೋಟಿಯಿದೆ. ಕಿರು ಮಾದರಿಯಲ್ಲಿ ಪಾಂಡ್ಯ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ಮುಂಚೂಣಿಯಲ್ಲಿದ್ದರೆ ಟೆಸ್ಟ್ ಮಾದರಿಗೆ ಬುಮ್ರಾ ಕೂಡಾ ರೇಸ್ ನಲ್ಲಿದ್ದಾರೆ.
ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾದ ಖಾಯಂ ನಾಯಕನಾಗಲು ರೆಡಿ ಎಂದಿದ್ದಾರೆ.
ನಾನು ಈಗಾಗಲೇ ಒಂದು ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದೇನೆ. ಟೆಸ್ಟ್ ಕ್ರಿಕೆಟ್ ನನಗೆ ಅತ್ಯಂತ ಮೆಚ್ಚಿನ ಕ್ರಿಕೆಟ್ ಫಾರ್ಮ್ಯಾಟ್. ವೇಗಿಯಾಗಿ ಸಾಕಷ್ಟು ಏಳು ಬೀಳು ಕಾಣಬೇಕಾಗುತ್ತದೆ. ಹಾಗಿದ್ದರೂ ತಂಡದ ನಿರ್ಧಾರದ ವಿಚಾರಗಳಲ್ಲಿ ನಾನೂ ಪಾಲ್ಗೊಳ್ಳಲು ಇಷ್ಟಪಡುತ್ತೇನೆ. ಅವಕಾಶ ಸಿಕ್ಕರೆ ತಂಡದ ನಾಯಕ ಯಾಕಾಗಬಾರದು? ಎನ್ನುವ ಮೂಲಕ ಬುಮ್ರಾ ಆಯ್ಕೆಗಾರರಿಗೆ ಸಂದೇಶ ರವಾನಿಸಿದ್ದಾರೆ.