ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇತ್ತೀಚೆಗೆ ಪದೇ ಪದೇ ಕೌಟುಂಬಿಕ ಕಾರಣ ನೀಡಿ ಪ್ರಮುಖ ಪಂದ್ಯಗಳಿಂದ ಹೊರಗುಳಿಯುತ್ತಿರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಕೊಹ್ಲಿಗೆ ಕಾಡುತ್ತಿರುವ ಸಮಸ್ಯೆಯಾದರೂ ಏನು? ಯಾಕೋ ಇತ್ತೀಚೆಗೆ ದೇಶದ ಪರ ಆಡುವುದಕ್ಕಿಂತ ಕೊಹ್ಲಿ ತಮ್ಮ ಕುಟುಂಬ ವಿಚಾರಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಕುಟುಂಬವೇ ಮುಖ್ಯವಾದರೆ ನಿವೃತ್ತಿ ಘೋಷಿಸಿ ಮನೆಯಲ್ಲಿರಲಿ. ಎಷ್ಟೋ ಯುವ ಆಟಗಾರರಿಗೆ ಅವಕಾಶ ಸಿಕ್ಕಂತಾಗುತ್ತದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ವಿಶ್ವಕಪ್ ಗೆ ಮೊದಲು, ದ.ಆಫ್ರಿಕಾ ಸರಣಿಗೆ ಮೊದಲು, ಅಫ್ಘಾನಿಸ್ತಾನ ಸರಣಿಗೆ ಮೊದಲು ಕೊಹ್ಲಿ ಕೌಟುಂಬಿಕ ಕಾರಣ ನೀಡಿ ದಿಡೀರ್ ಮನೆಗೆ ಮರಳಿದ್ದರು. ಆದರೆ ಅವರ ಸಮಸ್ಯೆಯೇನೆಂಬುದು ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಅನುಷ್ಕಾ ಶರ್ಮಾ ಎರಡನೇ ಮಗುವಿಗೆ ತಾಯಿಯಾಗುವುದರಲ್ಲಿದ್ದು, ಇದೇ ಕಾರಣಕ್ಕೆ ಪತ್ನಿ ಜೊತೆಗಿರಲು ಕೊಹ್ಲಿ ಪದೇ ಪದೇ ಮನೆಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಆದರೆ ಕೊಹ್ಲಿಯ ಅಪ್ಪಟ ಅಭಿಮಾನಿಗಳೂ ಇದರಿಂದ ಬೇಸರಗೊಂಡಿದ್ದಾರೆ. ಯಾಕೋ ಇತ್ತೀಚೆಗೆ ಕೌಟುಂಬಿಕ ವಿಚಾರಗಳಿಂದಾಗಿ ಕೊಹ್ಲಿ ತಮ್ಮ ನೈಜ ಆಟವನ್ನೇ ಮರೆಯುತ್ತಿದ್ದಾರೆ ಎಂದು ಬೇಸರಿಸಿಕೊಳ್ಳುತ್ತಿರುವವರೂ ಇದ್ದಾರೆ.