ಮುಂಬೈ: ಮುಂಬರುವ ಇಂಗ್ಲೆಂಡ್ ವಿರುದ್ಧದ ಟ20 ಮತ್ತು ಏಕದಿನ ಸರಣಿಯಿಂದ ಕೆಎಲ್ ರಾಹುಲ್ ಗೆ ವಿಶ್ರಾಂತಿ ನೀಡುವ ನಿರ್ಧಾರ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಿಷಭ್ ಪಂತ್ ಗೆ ಚಾನ್ಸ್ ಕೊಡಿಸಲು ಹೀಗೆ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆ ಮಾಡಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಇದಕ್ಕೆ ಮೊದಲು ನಡೆಯಲಿರುವ ಇಂಗ್ಲೆಂಡ್ ಸರಣಿಯಲ್ಲಿನ ಪ್ರದರ್ಶನ ಎಲ್ಲಾ ಆಟಗಾರರಿಗೆ ಮುಖ್ಯವಾಗಿದೆ.
ಆದರೆ ಕೆಎಲ್ ರಾಹುಲ್ ರನ್ನು ಇಂಗ್ಲೆಂಡ್ ಸರಣಿಯಿಂದ ಹೊರಗಿಡುತ್ತಿರುವುದು ನೋಡಿದರೆ ಅವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೆಎಲ್ ರಾಹುಲ್ ರನ್ನು ಬಿಸಿಸಿಐ ಬೇಕಾಬಿಟ್ಟಿ ಬಳಸಿಕೊಳ್ಳುತ್ತಿದೆ. ರಿಷಭ್ ಪಂತ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದರೂ ಅವರನ್ನು ಪ್ರಮೋಟ್ ಮಾಡಲು ರಾಹುಲ್, ಸಂಜು ಸ್ಯಾಮ್ಸನ್ ರಂತಹ ಆಟಗಾರರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಅಭಿಮಾನಿಗಳ ಆರೋಪವಾಗಿದೆ.