ಮುಂಬೈ: ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾದಿಂದ ಹೊರಗಿರುವ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಕೊನೆಗೂ ತಂಡಕ್ಕೆ ಬರಲು ವೇದಿಕೆ ಸಜ್ಜಾಗಿದೆ.
ಮೊಹಮ್ಮದ್ ಶಮಿ ಕಳೆದ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಫೈನಲ್ ತನಕ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ಬಳಿಕ ಅವರು ಗಾಯದಿಂದಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಸುಮಾರು ಒಂದೂವರೆ ವರ್ಷದಿಂದ ಅವರು ಕ್ರಿಕೆಟ್ ನಿಂದ ದೂರವುಳಿದಿದ್ದಾರೆ. ಇದರಿಂದಾಗಿ ಜಸ್ಪ್ರೀತ್ ಬುಮ್ರಾ ಮೇಲೆ ಹೆಚ್ಚುವರಿ ಹೊಣೆ ಬಿದ್ದಿತ್ತು. ಇದೀಗ ಬುಮ್ರಾ ಗಾಯಗೊಂಡಿದ್ದಾರೆ. ಈ ನಡುವೆ ಮೊಹಮ್ಮದ್ ಶಮಿ ತಂಡಕ್ಕೆ ಬರಲು ಸಿದ್ಧರಾಗಿದ್ದಾರೆ.
ಶಮಿಗೆ ಎನ್ ಸಿಎಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಸಿಕ್ಕಿದೆ. ಹೀಗಾಗಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಮತ್ತು ಅದಾದ ಬಳಿಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಶಮಿ ತಂಡಕ್ಕೆ ಬರುವುದು ಕನ್ ಫರ್ಮ್ ಆಗಿದೆ. ಚಾಂಪಿಯನ್ಸ್ ಟ್ರೋಫಿಗೆ ಪೂರ್ವ ಭಾವಿಯಾಗಿ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಶಮಿ ಕಮ್ ಬ್ಯಾಕ್ ಮಾಡುವ ಸಾಧ್ಯತೆಯಿದೆ. ಹೀಗಾಗಿ ಈ ಸರಣಿ ಚಾಂಪಿಯನ್ಸ್ ಟ್ರೋಫಿ ವೇಳೆಗೆ ತಂಡದ ಬೌಲಿಂಗ್ ಗೆ ಬಲ ಬಂದಂತಾಗಿದೆ.