KL Rahul: ಜ್ವರವಿದ್ದರೂ ಆಡಿ ಶತಕ ಸಿಡಿಸಿಬಿಟ್ಟ ಕೆಎಲ್ ರಾಹುಲ್

Krishnaveni K

ಶುಕ್ರವಾರ, 26 ಸೆಪ್ಟಂಬರ್ 2025 (12:08 IST)
ಲಕ್ನೋ: ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತದ ಎ ಪರ ಆಡುತ್ತಿರುವ ಕೆಎಲ್ ರಾಹುಲ್ ಜ್ವರವಿದ್ದರೂ ಆಡಿ ಶತಕ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 420 ಗಳಿಸಿತ್ತು. ಭಾರತ ಕೇವಲ 194 ರನ್ ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 185 ರನ್ ಗಳಿಗೆ ಆಲೌಟ್ ಆಗಿತ್ತು. ಇದೀಗ ಗೆಲುವಿಗೆ 412 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿರುವ ಭಾರತಕ್ಕೆ ಕೆಎಲ್ ರಾಹುಲ್ ಆಸರೆಯಾಗಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಭಾರತ 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿದೆ.

ಕೆಎಲ್ ರಾಹುಲ್ ಈ ಪಂದ್ಯಕ್ಕೆ ಮುನ್ನ ಜ್ವರದಿಂದ ಬಳಲುತ್ತಿದ್ದರು. ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ಅವರು ನಿನ್ನೆ ಒಮ್ಮೆ ಪಂದ್ಯದ ನಡುವೆಯೇ ಬ್ಯಾಟ್ ಮಾಡುವುದನ್ನು ಅರ್ಧಕ್ಕೇ ನಿಲ್ಲಿಸಿ ಮೈದಾನ ತೊರೆದಿದ್ದರು. ಆದರೆ ಮತ್ತೆ ಬ್ಯಾಟಿಂಗ್ ಮುಂದುವರಿಸಿರುವ ಅವರು ಇದೀಗ 103 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಅವರ ಈ ಬದ್ಧತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷವೆಂದರೆ ಅವರಿಗೆ ಸಾಥ್ ನೀಡುತ್ತಿರುವ ಸಾಯಿ ಸುದರ್ಶನ್ 98 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಾಯಿ ಸುದರ್ಶನ್ ಕೂಡಾ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದರು.  ಇದೀಗ ಭಾರತದ ಗೆಲುವಿಗೆ 151 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ