ಟ್ರೆಂಟ್ ಬ್ರಿಡ್ಜ್: ತೃತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ ಉತ್ತಮ ಆರಂಭ ದೊರಕಲು ನೆರವಾಗಿದ್ದಷ್ಟೇ ಅಲ್ಲದೆ, ಫೀಲ್ಡಿಂಗ್ ನಲ್ಲೂ ಮಿಂಚಿದ್ದಾರೆ.
ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ನಲ್ಲೂ ಪ್ರಮುಖ ಕ್ಯಾಚ್ ಹಿಡಿದು ತಂಡಕ್ಕೆ ನೆರವಾಗಿದ್ದ ಕೆಎಲ್ ರಾಹುಲ್ ದ್ವಿತೀಯ ಇನಿಂಗ್ಸ್ ನಲ್ಲಿ ಇದುವರೆಗೆ ಬಿದ್ದ ನಾಲ್ಕು ವಿಕೆಟ್ ಗಳ ಪೈಕಿ ಎರಡು ಕ್ಯಾಚ್ ತಾವೇ ಪಡೆದಿದ್ದಾರೆ.
ರಾಹುಲ್ ದ್ರಾವಿಡ್ ರಂತೆ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುವ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಮಾಡುವ ಮೂಲಕ ಕ್ರಿಕೆಟ್ ವಾಲ್ ನ್ನು ನೆನಪಿಸಿದ್ದಾರೆ. ಅಷ್ಟೇ ಅಲ್ಲದೆ, ಫೀಲ್ಡಿಂಗ್ ನಲ್ಲಿ ಬದಲಾದ ಅವರ ಆಕ್ರಮಣಕಾರಿ ಸ್ವಭಾವ ಕೂಡಾ ನೋಡುಗರಿಗೆ ಅಚ್ಚರಿ ಮೂಡಿಸಿದೆ.
ನಾಲ್ಕನೇ ದಿನದಾಟದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ಟೀಂ ಇಂಡಿಯಾ ನೀಡಿದ 520 ರನ್ ಗಳ ಬೃಹತ್ ಮೊತ್ತ ಚೇಸ್ ಮಾಡುವಲ್ಲಿ ಆರಂಭದಲ್ಲಿಯೇ ಎಡವಿದೆ. ಇಂದು ದಿನದ ಆರಂಭದಲ್ಲಿಯೇ ವೇಗಿ ಇಶಾಂತ್ ಶರ್ಮಾ ಆರಂಭಿಕರಿಬ್ಬರನ್ನೂ ಬಹುಬೇಗ ಪೆವಿಲಿಯನ್ ಗೆ ಕಳುಹಿಸಿದ್ದಾರೆ.
ಅದಾದ ಬಳಿಕ 84 ರನ್ ಗಳಿಸಿರುವ ಇಂಗ್ಲೆಂಡ್ ಮತ್ತೆ ಎರಡು ವಿಕೆಟ್ ಕಳೆದುಕೊಂಡಿದೆ. ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಉಳಿದೆರಡು ವಿಕೆಟ್ ಪಡೆದರು. ಸದ್ಯಕ್ಕೆ ಕ್ರೀಸ್ ನಲ್ಲಿ 3 ರನ್ ಗಳಿಸಿರುವ ನಾಯಕ ಜೋ ರೂಟ್ ಮತ್ತು 19 ರನ್ ಗಳಿಸಿರುವ ಜೋಸ್ ಬಟ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಉಳಿದ ವಿಕೆಟ್ ಗಳ ನೆರವಿನಿಂದ ಇಂಗ್ಲೆಂಡ್ ಗೆಲುವಿಗೆ ಇನ್ನೂ 437 ರನ್ ಗಳ ಬೃಹತ್ ಮೊತ್ತ ದಾಟಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.