ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಹೆಚ್ಚು ಪ್ರೋತ್ಸಾಹವಿಲ್ಲ, ಪ್ರಚಾರವಿಲ್ಲ ಹಾಗಿದ್ದರೂ ಅದ್ಭುತ ಪ್ರದರ್ಶನವೊಂದನ್ನು ತೋರಿ ಮಹಿಳಾ ವಿಶ್ವಕಪ್ ಸೆಮಿಫೈನಲ್ ಗೇರಿದೆ.
ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 185 ರನ್ ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತದ ವನಿತೆಯರು ವಿಶ್ವಕಪ್ ಸೆಮಿಫೈನಲ್ ಗೇರಿದ್ದಾರೆ. ಸೆಮಿಫೈನಲ್ ನಲ್ಲಿ ಕಠಿಣ ಎದುರಾಳಿ ಆಸ್ಟ್ರೇಲಿಯಾವನ್ನು ಎದುರಿಸಬೇಕಿದೆ.
ಸರ್ವಾಂಗೀಣ ಪ್ರದರ್ಶನ ತೋರಿದ ಮಹಿಳೆಯರು ನ್ಯೂಜಿಲೆಂಡ್ ಗೆ ಮರ್ಮಾಘಾತ ನೀಡಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 265 ರನ್ ಪೇರಿಸಿತು. ಆರಂಭದಲ್ಲಿ ಕೊಂಚ ನಿಧಾನವಾಗಿ ಆಡಿದರೂ ಅಂತಿಮವಾಗಿ ನಾಯಕಿ ಮಿಥಾಲಿ ರಾಜ್ ಶತಕ ಹಾಗೂ ವೇದಾ ಕೃಷ್ಣ ಮೂರ್ತಿಯವರ 70 ರನ್ ಗಳ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿತು. ಮಿಥಾಲಿ ರಾಜ್ ಈ ಪಂದ್ಯದಲ್ಲಿ ಐಸಿಸಿ ಕೂಟದಲ್ಲಿ 1000 ಪ್ಲಸ್ ರನ್ ಪೇರಿಸಿ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನೂ ಮಾಡಿದರು.
ನಂತರ ಬೌಲರ್ ಗಳ ಸರದಿ. ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಮಿಂಚಿದ ಭಾರತ ಒಂದು ಹಂತದಲ್ಲಿ ಕಿವೀಸ್ ಮಹಿಳೆಯರನ್ನು 50 ರೊಳಗೆ ಆಲೌಟ್ ಮಾಡುತ್ತಾರೇನೋ ಎಂದೆನಿಸಿತ್ತು. ಆದರೆ ಹಾಗಾಗಲಿಲ್ಲ. ಕೇವಲ 25.3 ೋವರ್ ಗಳಲ್ಲಿ 79 ರನ್ ಗಳಿಗೆ ಕಿವೀಸ್ ಮಹಿಳೆಯರು ಆಲೌಟ್ ಆದರು.