ಕೊನೆಯ ಟಿ20 ವಿಶ್ವಕಪ್ ಆಡುತ್ತಿದ್ದ ಮಿಥಾಲಿ ರಾಜ್ ಗೆ ಅವಮಾನ ಮಾಡಿದರೇ ನಾಯಕಿ ಹರ್ಮನ್ ಮತ್ತು ಟೀಂ?!

ಸೋಮವಾರ, 26 ನವೆಂಬರ್ 2018 (08:42 IST)
ನವದೆಹಲಿ: ವೆಸ್ಟ್ ಇಂಡೀಸ್ ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಮಿಥಾಲಿ ರಾಜ್ ಗೆ ಅವಕಾಶ ಕೊಡದ ವಿಚಾರವಾಗಿ ಭಾರೀ ವಿವಾದವಾಗಿತ್ತು.


ಆದರೆ ಈ ವಿಚಾರಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಹಿರಿಯ ಆಟಗಾರ್ತಿಗೆ ಮಹಿಳಾ ಕ್ರಿಕೆಟ್ ಮ್ಯಾನೇಜ್ ಮೆಂಟ್ ಅವಮಾನ ಮಾಡಿತೇ ಎಂಬ ಅನುಮಾನ ಮೂಡಿಸಿದೆ.

ಗಾಯದಿಂದ ಚೇತರಿಸಿಕೊಂಡಿದ್ದ ಮಿಥಾಲಿ ಸೆಮಿಫೈನಲ್ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿದ್ದರು. ಪಂದ್ಯದ ದಿನವೂ ಅಭ್ಯಾಸ ನಡೆಸಿದ್ದ ಮಿಥಾಲಿಗೆ ಕೆಲವೇ ಕ್ಷಣಗಳ ಮೊದಲು ನೀವು ಆಡುವ ಬಳಗದಲ್ಲಿ ಇಲ್ಲ ಎಂಬ ವಿಚಾರ ಹೇಳಲಾಯಿತು ಎನ್ನಲಾಗಿದೆ.

ಇದರಿಂದ ಮಿಥಾಲಿ ತುಂಬಾ ನೊಂದುಕೊಂಡರು ಎಂದು ಅವರ ಕೋಚ್ ಆರ್ ಎಸ್ ಆರ್ ಮೂರ್ತಿ ಬಹಿರಂಗಪಡಿಸಿದ್ದಾರೆ. ಅದಕ್ಕಿಂತಲೂ ಹೆಚ್ಚು ಮಿಥಾಲಿಗೆ ನೋವಾಗಿದ್ದು, ಪಂದ್ಯ ಸೋತ ಬಳಿಕ ನಾಯಕಿ ಹರ್ಮನ್ ಪ್ರೀತ್ ಕೌರ್ ನೀಡಿದ ಪ್ರತಿಕ್ರಿಯೆ. ಮಿಥಾಲಿಯನ್ನು ಕೈ ಬಿಟ್ಟಿದ್ದರ ಬಗ್ಗೆ ನನಗೆ ಪಶ್ಚತ್ತಾಪವಿಲ್ಲ ಎಂದು ಹರ್ಮನ್ ಹೇಳಿದ್ದರು. ಇದು ಮಿಥಾಲಿಯನ್ನು ಇನ್ನಷ್ಟು ಘಾಸಿಗೊಳಿಸಿದೆ ಎಂದು ಮೂರ್ತಿ ಹೇಳಿದ್ದಾರೆ.

ಮಿಥಾಲಿ ರಾಜ್ ಕೈಬಿಟ್ಟ ವಿಚಾರ ಇದೀಗ ಭಾರೀ ಚರ್ಚೆಗೊಳಗಾಗಿದ್ದು, ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಇದೊಂದು ತಪ್ಪು ನಿರ್ಧಾರವಾಗಿತ್ತು ಎಂದು ಬಣ್ಣಿಸಿದ್ದಾರೆ. ಮಿಥಾಲಿ ಸಹ ಆಟಗಾರ್ತಿಯಾಗಿದ್ದ ಹಿರಿಯ ವೇಗಿ ಜೂಲನ್ ಗೋಸ್ವಾಮಿ ಕೂಡಾ ಇದರಿಂದ ಬೇಸರವುಂಟಾಗಿದ್ದಾಗಿ ಹೇಳಿದ್ದಾರೆ. ಒಟ್ಟಾರೆ ಭಾರತ ಸೆಮಿಫೈನಲ್ ಸೋಲುವುದರ ಜತೆಗೆ ಮಹಿಳಾ ಕ್ರಿಕೆಟ್ ನ ಸಚಿನ್ ತೆಂಡುಲ್ಕರ್ ಎಂದೇ ಪರಿಗಣಿತವಾಗಿರುವ ಹಿರಿಯ ಆಟಗಾರ್ತಿಗೆ ಅವಮಾನ ಮಾಡಿ ವಿವಾದಕ್ಕೊಳಗಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ