ತನ್ನದೇ ಹುಡುಗರಿಂದಾಗಿ ರಣಜಿಯಲ್ಲಿ ಸೋಲುಂಡ ಎಂಎಸ್ ಧೋನಿ

ಬುಧವಾರ, 4 ಜನವರಿ 2017 (17:18 IST)
ನಾಗ್ಪುರ: ಟೀಂ ಇಂಡಿಯಾದಲ್ಲಿ ತನ್ನ ಟ್ರಂಪ್ ಕಾರ್ಡ್ ನಂತಿದ್ದ ಬೌಲರ್ ಗಳಿಂದಾಗಿಯೇ ಎಂಎಸ್ ಧೋನಿ ತವರು ತಂಡ ಜಾರ್ಖಂಡ್ ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಗುಜರಾತ್ ವಿರುದ್ಧ 123 ರನ್ ಗಳಿಂದ ಸೋತಿದೆ.


ಜಸ್ಪ್ರೀತ್ ಬುಮ್ರಾ ಮತ್ತು ಆರ್ ಪಿ ಸಿಂಗ್ ದಾಳಿಗೆ ಕುಸಿದ ಜಾರ್ಖಂಡ್ ತಂಡ ಕೇವಲ 111 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಮೊದಲ ಬಾರಿಗೆ ರಣಜಿ ಗೆಲ್ಲುವ ಉತ್ಸಾಹದಲ್ಲಿ ತಂಡ ನಿರಾಸೆ ಅನುಭವಿಸಿದೆ.

ಗೆಲ್ಲಲು 236 ರನ್ ಗಳ ಗುರಿ ಪಡೆದಿದ್ದ ಜಾರ್ಖಂಡ್  ನಾಲ್ಕನೇ ದಿನ ದ್ವಿತೀಯ  ಇನಿಂಗ್ಸ್ ನಲ್ಲಿ ಎಲ್ಲೂ ಚೇತರಿಸಿಕೊಳ್ಳುವ ಲಕ್ಷಣವೇ ತೋರಲಿಲ್ಲ. ವಿಶೇಷವೆಂದರೆ ಜಾರ್ಖಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಅಂತಹ ಪ್ರದರ್ಶನ ಬರಲಿಲ್ಲ.

ಮೊದಲ ಇನಿಂಗ್ಸ್ ನಲ್ಲಿ ಮಾರಕ ದಾಳಿ ಸಂಘಟಿಸಿ 6 ವಿಕೆಟ್ ಕಿತ್ತಿದ್ದ ಆರ್ ಪಿ ಸಿಂಗ್ ದ್ವಿತೀಯ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ಕಿತ್ತರು. ಟೀಂ ಇಂಡಿಯಾದ ಸ್ಥಿರ ಬೌಲರ್ ಜಸ್ಪ್ರೀತ್ ಬುಮ್ರಾ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಿತ್ತಿದ್ದರೆ, ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಿತ್ತರು.  ಇದರೊಂದಿಗೆ ಸೀಮಿತ ಓವರ್ ಗಳ ನಾಯಕ ಹಾಗೂ ಜಾರ್ಖಂಡ್ ತಂಡದ ಮೆಂಟರ್ ಎಂಎಸ್ ಧೋನಿಗೆ ಒಂದು ರೀತಿಯಲ್ಲಿ ಮುಖ ಭಂಗವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ