ಟೀಂ ಇಂಡಿಯಾದಲ್ಲಿ ಹಳೇ ಆಟಗಾರರು ಮಾತ್ರವಲ್ಲ, ಆಟವೂ ಹಳೆಯದೇ!

ಭಾನುವಾರ, 15 ಜನವರಿ 2017 (17:11 IST)
ಪುಣೆ:  ಟೀಂ ಇಂಡಿಯಾಕ್ಕೆ ಹಳೇ ಆಟಗಾರರು ಎಂಟ್ರಿ ಕೊಟ್ಟಿರುವುದು ಮಾತ್ರವಲ್ಲ, ಅವರ ಆಟವೂ ಹಳೇ ಕಾಲವನ್ನು ನೆನಪಿಸುವಂತೇ ಇತ್ತು. ಯಾಕೆಂದರೆ ಟೀಂ ಇಂಡಿಯಾ ಪಟ ಪಟ ವಿಕೆಟ್ ಉರುಳಿಸುವ ಹೊತ್ತಿಗೆ ಇಂಗ್ಲೆಂಡ್ ರನ್ ಗುಡ್ಡೆಯ ಮೇಲೆ ನಿಂತು ನಗುತ್ತಿತ್ತು.


ಪುಣೆಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲೇ ಸಣ್ಣ ಮೈದಾನ. ಜತೆಗೆ ಭಾರತದ ಬೌಲರ್ ಗಳದ್ದೂ ದಿಕ್ಕಾಪಾಲಾದ ಬೌಲಿಂಗ್. ಸ್ವಲ್ಪ ಬ್ಯಾಟ್ ಮೇಲೆತ್ತಿದರೂ ಸಾಕು. ಬಾಲ್ ಆಕಾಶದೆತ್ತರಕ್ಕೆ ಹಾರಿ ಬೌಂಡರಿ ಗೆರೆ ದಾಟುತ್ತಿತ್ತು. ಇದೆಲ್ಲಾ ಕೆಲ ವರ್ಷದ ಹಿಂದೆ ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತ ಯಾವತ್ತೂ ತವರಿನಲ್ಲಿ ಇಷ್ಟೊಂದು ಹೀನಾಯವಾಗಿ ಆಡಿರಲಿಲ್ಲವೇನೋ.

ಮೊದಲ ಬಾರಿಗೆ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್ ಕೊಹ್ಲಿಗೆ ಆಗಾಗ ಹಳೇ ನಾಯಕ ಧೋನಿ ಸಲಹೆ ಕೊಡುತ್ತಿದ್ದುದು ಕಂಡುಬಂತು. ಆದರೂ ಇಂಗ್ಲೆಂಡ್  ಬ್ಯಾಟಿಂಗ್ ಹಡಗನ್ನು ಜೋ ರೂಟ್ ಹೊತ್ತುಕೊಂಡು ಅಗತ್ಯಕ್ಕೆ ತಕ್ಕಂತೆ ಇನಿಂಗ್ಸ್ ಕಟ್ಟಿದರು. ಇದರಿಂದಾಗಿ ಸಹ ಬ್ಯಾಟ್ಸ್ ಮನ್ ಗಳಿಗೆ ರನ್ ಗಳಿಸುವುದು ಸರಾಗವಾಯಿತು. ಜೋ ರೂಟ್ 78 ರನ್ ಗಳಿಸಿ ಔಟಾಗುವಷ್ಟರಲ್ಲಿ ಇಂಗ್ಲೆಂಡ್ ಸುಸ್ಥಿತಿಗೆ ತಲುಪಿತ್ತು.

ಹೀಗಾಗಿ ಮತ್ತೆ ಬಂದ ಬ್ಯಾಟ್ಸ್ ಮನ್ ಗಳು ಯದ್ವಾ ತದ್ವಾ ಚಚ್ಚಿದರು. ಬೆನ್ ಸ್ಟೋಕ್ ಕೇವಲ 40 ಎಸೆತಗಳಲ್ಲಿ 62 ರನ್ ಗಳಿಸಿದರು. ಬಂದವರೆಲ್ಲಾ ಈ ರೀತಿ ಸಿಕ್ಸರ್ ಸಿಡಿಸುತ್ತಿದ್ದರೆ ಇಂಗ್ಲೆಂಡ್ ಸ್ಕೋರ್ 50 ಓವರ್ ಗಳಲ್ಲಿ ಭರ್ತಿ 350 ರನ್.

ಭಾರತೀಯ ಬೌಲರ್ ಗಳ ಪೈಕಿ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಕಿತ್ತರಾದರೂ, ಸಾಕಷ್ಟು ರನ್ ಬಿಟ್ಟುಕೊಟ್ಟರು. ಅದರಲ್ಲೂ ಬುಮ್ರಾ ಸಂಪೂರ್ಣ ಹಳಿ ತಪ್ಪಿದ್ದರು. ಇನ್ನು ಸ್ಪಿನ್ನರ್ ಗಳು ಯಾವುದೇ ಮೋಡಿ ಮಾಡಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ